ಕಲ್ಪತರು ನಾಡು’ ತುಮಕೂರು ‌ಜಿಲ್ಲೆಯಲ್ಲಿ ಜೀತಪದ್ದತಿ ಇನ್ನೂ‌ ಜೀವಂತವಾಗಿದ್ದು, ಶುಂಠಿ ಕ್ಯಾಂಪ್‌ಗಳಲ್ಲಿ ಜೀತದಾಳುಗಳಂತೆ ದುಡಿಯುತ್ತಿದ್ದ 36 ಬಡ ಕೂಲಿ ಕಾರ್ಮಿಕರನ್ನ ಪೊಲೀಸ್ ಅಧಿಕಾರಿಗಳು ರಕ್ಷಣೆ ಮಾಡಿದ್ದಾರೆ.

ಗೃಹ ಸಚಿವ ಪರಮೇಶ್ವರ್ ಅವರ ತವರು ಜಿಲ್ಲೆಯಾದ ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ಹಾಲ್ಕುರಿಕೆ ಗ್ರಾಮ, ಮಂಜುನಾಥ ಪುರ ಸುತ್ತಮುತ್ತಲ ಗ್ರಾಮಗಳಲ್ಲಿ ಕೆಲವು ಪ್ರಭಾವಿ ವ್ಯಕ್ತಿಗಳು ರೈತರಿಂದ ನೂರಾರು ಏಕರೆ ಭೂಮಿಯನ್ನ ಗುತ್ತಿಗೆ ಆಧಾರದಲ್ಲಿ‌ ಬಾಡಿಗೆ ಪಡೆದು ಶುಂಠಿ ಬೆಳೆಯನ್ನ ಬೆಳೆಯುತ್ತಿದ್ದಾರೆ.‌ ಶುಂಠಿ ಹೊಲದಲ್ಲಿ ಕೆಲಸ ಮಾಡಲು ಮೈಸೂರು, ಚಾಮರಾಜನಗರ, ಕೊಳ್ಳೇಗಾಲ, ಬಳ್ಳಾರಿ, ವಿಜಯಪುರ ಸೇರಿದಂತೆ ವಿವಿಧ ಭಾಗಗಳಿಂದ ಬಡ ಕೂಲಿ‌ ಕಾರ್ಮಿಕರಿಗೆ ಹೆಚ್ಚಿನ ಕೂಲಿ ಆಸೆ ತೋರಿಸಿ ಕರೆತಂದು ಜೀತದಾಳುಗಳಂತೆ ದುಡಿಸಿಕೊಳ್ಳುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಕಾರ್ಮಿಕರ ಬಳಿ ಇದ್ದ ಆಧಾರ್ ಕಾರ್ಡ್, ವೋಟರ್ ಐಡಿ, ಮೊಬೈಲ್‌ ಇನ್ನಿತರೆ ವಸ್ತುಗಳನ್ನ ಕಿತ್ತುಕೊಂಡು ಹೆದರಿಸಿ ಬೆದರಿಸಿ ಶುಂಠಿ ಕ್ಯಾಂಪ್ (ಶೆಡ್)ನಲ್ಲಿರಿಸಿದ್ದಾರೆ. ಕಾರ್ಮಿಕರ ಕಾವಲಿಗೆ ಗೂಂಡಾಗಳನ್ನು ನೇಮಿಸಿ ಜೀತದಾಳುಗಳಂತೆ ದುಡಿಸಿಕೊಳ್ಳುತ್ತಿದ್ದರು ಎಂದು ತಿಳಿದುಬಂದಿದೆ.

ಕಾರ್ಮಿಕರು ದಿನವಿಡಿ ನಿರಂತರವಾಗಿ ಹೊಲದಲ್ಲಿ ಕೆಲಸ ಮಾಡಬೇಕು. ಒಂದು ವೇಳೆ ತಪ್ಪಿಸಿಕೊಳ್ಳಲು ಯತ್ನಿಸಿದರೆ, ಕೆಲಸ ಮಾಡದಿದ್ದರೆ ಕಾವಲುಗಾರರು ದೊಣ್ಣೆಗಳಿಂದ ದೇಹದಲ್ಲಿ ಬರೆ ಬರುವ ಹಾಗೆ ಹೊಡೆದು ದೌರ್ಜನ್ಯ ಮಾಡುತ್ತಾರೆ ಎಂದು ಕಾರ್ಮಿಕರು ಅಳಲು ‌ತೋಡಿಕೊಂಡಿದ್ದಾರೆ.

ಇದುವೆರೆಗೂ ಹಾಸನ ಜಿಲ್ಲೆ ಅರಸಿಕೆರೆ ತಾಲೂಕಿನ ಶುಂಠಿ ಕ್ಯಾಂಪ್‌ಗಳಲ್ಲಿಟ್ಟು ಬೇರೆ ಬೇರೆ ಕಡೆ ದುಡಿಸಿಕೊಳ್ಳುತ್ತಿದ್ದರು. ಕಳೆದ ಎರಡು ವರ್ಷಗಳಿಂದ ಇದೇ ರೀತಿ ದುಡಿಸಿಕೊಳ್ಳುತ್ತಿದ್ದು, ಇದುವರೆಗೂ ಒಂದು ರೂಪಾಯಿ ಕೂಲಿಯನ್ನು ನೀಡಿಲ್ಲ. ಸಂಜೆಯಾದರೆ ಮದ್ಯ ನೀಡುತ್ತಾರೆ, ಕೂಲಿ ಕೇಳಿದರೆ ಹೊಡೆಯುತ್ತಾರೆ ಎಂದು ಕಾರ್ಮಿಕರು ತಮ್ಮ ನೋವು ತೋಡಿಕೊಂಡಿದ್ದಾರೆ.

ಈ ಬಗ್ಗೆ ಮಾಹಿತಿ ಅರಿತ ಹೊನ್ನವಳ್ಳಿ ಪೊಲೀಸರು, ಸ್ಥಳೀಯರ ನೆರವಿನಿಂದ ಬುಧವಾರ ರಾತ್ರಿ ಶುಂಠಿ ಕ್ಯಾಂಪ್‌ಗಳಲ್ಲಿದ್ದ 30 ಮಂದಿ ಕೂಲಿ ಕಾರ್ಮಿಕರನ್ನು ರಕ್ಷಣೆ ಮಾಡಿದ್ದಾರೆ. ಕಾರ್ಮಿಕರನ್ನು ಸದ್ಯ ಹೊನ್ನವಳ್ಳಿ ಸಮುದಾಯ ಭವನದಲ್ಲಿರಿಸಲಾಗಿದೆ. ಸ್ಥಳಕ್ಕೆ ತಿಪಟೂರು ತಹಶೀಲ್ದಾರ್ ಹಾಗೂ ಕಾರ್ಮಿಕ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ತನಿಖೆ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *