Bengaluru Mysuru Expressway : ಬೆಂಗಳೂರು – ಮೈಸೂರು ಎಕ್ಸ್‌ಪ್ರೆಸ್‌ ವೇಗೆ ಎಕ್ಸಿಟ್‌ ಮತ್ತು ಎಂಟ್ರಿ ರಸ್ತೆಗಳ ನಿರ್ಮಾಣ ಸದ್ಯಕ್ಕಿಲ್ಲ. ಹೆದ್ದಾರಿ ಪ್ರಾಧಿಕಾರದ ನೀಲನಕ್ಷೆಗೆ ಕೇಂದ್ರ ಸರ್ಕಾರದ ಸಮ್ಮತಿ ಸಿಕ್ಕಿಲ್ಲ, ಅದಲ್ಲದೇ ಹೆದ್ದಾರಿ ಯೋಜನಾ ನಿರ್ದೇಶಕ ಶ್ರೀಧರ್‌ ಅವರನ್ನು ವರ್ಗಾವಣೆ ಮಾಡಲಾಗಿದೆ. ಮಾರ್ಗದ ನಡುವೆ ನಗರಗಳನ್ನು ಸಂಪರ್ಕಿಸುವ ಎಕ್ಸಿಟ್‌ ಹಾಗೂ ಎಂಟ್ರಿ ರಸ್ತೆಗಳ ನಿರ್ಮಾಣ ಕೆಲಸ ಇನ್ನೂ ಬಾಕಿ ಇದೆ.

Bengaluru Mysuru Expressway
ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್‌ ವೇ (ಸಂಗ್ರಹ ಚಿತ್ರ)

ಹೈಲೈಟ್ಸ್‌:

  • ಬೆಂಗಳೂರು – ಮೈಸೂರು ಎಕ್ಸ್‌ಪ್ರೆಸ್‌ ವೇಗೆ ಸದ್ಯಕ್ಕಿಲ್ಲ ಎಕ್ಸಿಟ್‌ – ಎಂಟ್ರಿ
  • ಹೆದ್ದಾರಿ ಪ್ರಾಧಿಕಾರದ ನೀಲನಕ್ಷೆಗೆ ಸಿಗದ ಕೇಂದ್ರ ಸರ್ಕಾರದ ಸಮ್ಮತಿ
  • ರಾಷ್ಟ್ರೀಯ ಹೆದ್ದಾರಿ ಪ್ರಾದೇಶಿಕ ಯೋಜನಾ ನಿರ್ದೇಶಕ ಶ್ರೀಧರ್‌ ವರ್ಗಾವಣೆ

* ಎಸ್‌ ಶ್ರೀಧರ್‌ ರಾಮನಗರ
ರಾಜ್ಯ ರಾಜಧಾನಿ ಹಾಗೂ ಸಾಂಸ್ಕೃತಿಕ ನಗರಿಯನ್ನು ಬೆಸೆಯುತ್ತಿರುವ ಎಕ್ಸ್‌ಪ್ರೆಸ್‌ ವೇ ಕೆಲಸ ಬಹುತೇಕ ಮುಗಿದಿದೆ. ಈ ಹೆದ್ದಾರಿಗೆ ಮಾರ್ಗ ಮಧ್ಯದ ನಗರಗಳನ್ನು ಸಂಪರ್ಕಿಸುವ ಎಕ್ಸಿಟ್‌ ಹಾಗೂ ಎಂಟ್ರಿ (ಪ್ರವೇಶ – ನಿರ್ಗಮನ) ರಸ್ತೆಗಳ ನಿರ್ಮಾಣ ಕೆಲಸ ಇನ್ನೂ ಬಾಕಿ ಇದೆ.

ಹಲವು ಕಡೆ ಎಕ್ಸಿಟ್‌ ಮತ್ತು ಎಂಟ್ರಿ ರಸ್ತೆಗಳನ್ನು ನಿರ್ಮಿಸಲಾಗಿದ್ದರೂ ಅವು ವೈಜ್ಞಾನಿಕವಾಗಿಲ್ಲ ಎಂಬ ದೂರು ಇದೆ. ಇದರಿಂದಾಗಿ ಎಕ್ಸ್‌ಪ್ರೆಸ್‌ ವೇ ಪಯಣವನ್ನು ಕ್ಲೋಸ್‌ ಟೋಲ್‌ ಆಗಿ ಪರಿವರ್ತಿಸಲು ಇನ್ನೂ ಕಾಯಬೇಕಿದೆ. ಸದ್ಯ ಚಾಲ್ತಿಯಲ್ಲಿರುವ ಓಪನ್‌ ಟೋಲ್‌ಗಳಿಂದ ಪ್ರಯಾಣಿಕರಿಗೆ ಹೊರೆ ಜಾಸ್ತಿ ಇದೆ.

ಸಿಗದ ಕೇಂದ್ರದ ಒಪ್ಪಿಗೆ

ಎಕ್ಸ್‌ಪ್ರೆಸ್‌ ವೇ ಮಾರ್ಗದಲ್ಲಿಒಟ್ಟು 6 ನಗರಗಳಿಗೆ ಸಂಪರ್ಕ ಕಲ್ಪಿಸಲು ಎಂಟ್ರಿ ಹಾಗೂ ಎಕ್ಸಿಟ್‌ ನೀಡಲು ಹೆದ್ದಾರಿ ಪ್ರಾಧಿಕಾರವು ಹೊಸ ನೀಲನಕ್ಷೆ (ಡಿಸೈನ್‌) ಸಿದ್ಧಪಡಿಸಿ 6 ತಿಂಗಳು ಕಳೆದಿದೆ. ಇದಕ್ಕೆ ನಿಗದಿಪಡಿಸಿರುವ ಜಾಗಗಳನ್ನು ಹೆದ್ದಾರಿ ಪ್ರಾಧಿಕಾರ ಈಗಾಗಲೇ ವಶಪಡಿಸಿಕೊಂಡಿದೆ. ಆದರೆ, ಹಣ ಬಿಡುಗಡೆ ಆಗಿಲ್ಲ. ಈ ತಿಂಗಳ ಅಂತ್ಯದ ಹೊತ್ತಿಗೆ ಕೇಂದ್ರ ಸರಕಾರ ತಾತ್ವಿಕ ಒಪ್ಪಿಗೆ ನೀಡುವ ಸಾಧ್ಯತೆ ಇದೆ. ಈ ನಡುವೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಶ್ರೀಧರ್‌ ಅವರನ್ನು ಇಂಡಿಯನ್‌ ಎಂಜಿನಿಯರ್‌ ಸರ್ವೀಸ್‌ಗೆ ವರ್ಗಾವಣೆ ಮಾಡಲಾಗಿದ್ದು, ಇದರಿಂದ ಒಟ್ಟಾರೆ ಯೋಜನೆಯ ಪ್ರಗತಿಗೆ ಹಿನ್ನಡೆ ಆಗಿದೆ.

ಏನಾಗಿದೆ?

ಎಂಟ್ರಿ ಹಾಗೂ ಎಕ್ಸಿಟ್‌ಗಳನ್ನು ಒಂದೇ ಕಡೆ ನೀಡಲು ಕೇಂದ್ರವು ಬೈಪಾಸ್‌ ಮಾದರಿ ಎಕ್ಸ್‌ಪ್ರೆಸ್‌ ವೇ ಕಾಮಗಾರಿಯ ಡಿಸೈನ್‌ಗೆ ಒಪ್ಪುತ್ತಿಲ್ಲ. ಏಕೆಂದರೆ ಒಂದೇ ಕಡೆ ಎಕ್ಸಿಟ್‌-ಎಂಟ್ರೀ ನೀಡಲು ರೌಂಡ್‌ ಏಲಿವೇಟರ್‌ ನೀಡಬೇಕಾಗುತ್ತದೆ. ಇದಕ್ಕೆ ಹೆಚ್ಚುವರಿ ಭೂಮಿ ಬೇಕಾಗುತ್ತದೆಯಲ್ಲದೇ, ಒಟ್ಟಾರೆ ಕಾಮಗಾರಿಯ ಖರ್ಚೂ ಹೆಚ್ಚಾಗುತ್ತಿದೆ. ಹೀಗಾಗಿ ನಗರಗಳಿಗೆ ಕಿಮೀ ದೂರದಲ್ಲೇ ಪ್ರತ್ಯೇಕ ಎಂಟ್ರಿ ಹಾಗೂ ಎಕ್ಸಿಟ್‌ಗಳನ್ನು ನೀಡಲು ಪ್ರಾಧಿಕಾರ ಯೋಜನೆ ರೂಪಿಸಿತ್ತು.

ಎಂಟ್ರಿ-ಎಕ್ಸಿಟ್‌ ಸಂಬಂಧ ನಾಲ್ಕೈದು ತಿಂಗಳ ಹಿಂದೆಯೇ ಪ್ಲ್ಯಾನ್‌ ರೂಪಿಸಲಾಗಿದೆ. ಎಲ್ಲವೂ ಅಂದುಕೊಂಡಂತೆ ಕೆಲಸಗಳು ನಡೆದರೆ ಆದಷ್ಟು ಬೇಗನೇ ಎಕ್ಸ್‌ಪ್ರೆಸ್‌ ವೇ ಕ್ಲೋಸ್‌ ಟೋಲ್‌ ಆಗಿ ಬದಲಾವಣೆ ಆಗಲಿದೆ. ಸದ್ಯಕ್ಕೆ ನಾವು ಇಂಡಿಯನ್‌ ಎಂಜಿನಿಯರ್‌ ಸರ್ವೀಸ್‌ಗೆ ನಾನು ವರ್ಗಾವಣೆಗೊಂಡಿದ್ದೇನೆ.

ಶ್ರೀಧರ್‌, ಯೋಜನಾ ನಿರ್ದೇಶಕ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ

ಎಲ್ಲೆಲ್ಲಿ ಯೋಜನೆ?

ಬೆಂಗಳೂರಿನಿಂದ ಪಂಚಮುಖಿ ಆಂಜನೇಯ ಸ್ವಾಮಿ ದೇಗುಲದಿಂದ ಫ್ಲೈ ಓವರ್‌ ಮೂಲಕ ತೆರಳುವ ವಾಹನಗಳು ಬಿಡದಿ ಟೋಲ್‌ ಪ್ಲ್ಯಾಜಾ ಬಳಿಕ ಎಡಕ್ಕೆ ಎಕ್ಸಿಟ್‌ ತೆಗೆದುಕೊಳ್ಳಬಹುದು. ಇಲ್ಲವೇ ಬಿಡದಿ ಬೈಪಾಸ್‌ನಲ್ಲಿ ಎಕ್ಸಿಟ್‌ ಪಡೆದು ಮುಂದೆ ಅದೇ ಮಾರ್ಗದಲ್ಲಿ ಸಾಗಿ ಎಕ್ಸ್‌ಪ್ರೆಸ್‌ವೇ ಸೇರಿಕೊಳ್ಳಬಹುದು. ಇವೆಲ್ಲವೂ ರೂಪಿಸಿ ಆರು ತಿಂಗಳಾಗಿದೆ. ಇವು ಅವೈಜ್ಞಾನಿಕ ಎಂಬುದು ನಾಗರಿಕರ ಆರೋಪವಾಗಿದೆ.

  • ಬಿಡದಿಯಿಂದ 2 ಕಿಮೀ ದೂರದ ಬಳಿಕ ಎಕ್ಸಿಟ್‌ ಮತ್ತು ಎಕ್ಸಿಟ್‌
  • ರಾಮನಗರದ ಬಸವನಪುರ ಬಳಿ ಅನಿಮಲ್‌ ಅಂಡರ್‌ ಪಾಸ್‌ ಇದೆ. ಹೀಗಾಗಿ ಇಲ್ಲಿ ಸಂಗಬವನದೊಡ್ಡಿ ಬಳಿ ಬೆಂಗಳೂರಿನಿಂದ ಎಕ್ಸಿಟ್‌
  • ಮಾಗಡಿಯ ರಸ್ತೆಯ ಕೆಂಪೇಗೌಡನದೊಡ್ಡಿ ಬಳಿಕ ಮೈಸೂರಿಗೆ ಎಂಟ್ರಿ ಹಾಗೂ ಎಕ್ಸಿಟ್‌
  • ಚನ್ನಪಟ್ಟಣದ ತಿಟ್ಟಮಾರನಹಳ್ಳಿ ಹಾಗೂ ಮತ್ತಿಕೆರೆಯ ಶೆಟ್ಟಿಹಳ್ಳಿ ಬಳಿ ಬೆಂಗಳೂರಿನಿಂದ ಎಕ್ಸಿಟ್‌
  • ಶೆಟ್ಟಿಹಳ್ಳಿಯಿಂದ 5 ಕಿಮೀ ಮುಂದೆ ಸಾಗಿ ನಿಡಘಟ್ಟ ಬಳಿ ಮೈಸೂರಿನಿಂದ ಎಂಟ್ರಿ, ಎಕ್ಸಿಟ್‌
  • ಮದ್ದೂರು ಫ್ಲೈ ಓವರ್‌ ಬಳಿಕ ಎರಡು ಕಡೆ ಎಂಟ್ರಿ ಹಾಗೂ ಎಕ್ಸಿಟ್‌
  • ಮಂಡ್ಯದ ಅಮರಾವತಿಗೂ ಹಿಂದೆಯೇ ಬೆಂಗಳೂರು ಕಡೆಯಿಂದ ಎಕ್ಸಿಟ್‌
  • ಮಂಡ್ಯ ಬೈಪಾಸ್‌ ಬಳಿಕ ಎಕ್ಸಿಟ್‌ ಮರ್ಜಿಂಗ್‌, ಇದೇ ಜಾಗದಲ್ಲಿ ಮೈಸೂರಿನಿಂದ ಎಂಟ್ರಿ ಹಾಗೂ ಎಕ್ಸಿಟ್‌
  • ಶ್ರೀರಂಗಪಟ್ಟಣದ ಟೋಲ್‌ ಬಳಿಕ ಮೈಸೂರು ಕಡೆಗೆ ಎಕ್ಸಿಟ್‌
  • ಕರಿಘಟ್ಟ ರಸ್ತೆ ಬಳಿ ಮೈಸೂರಿನಿಂದ ಬೆಂಗಳೂರಿಗೆ ಎಂಟ್ರಿ

Leave a Reply

Your email address will not be published. Required fields are marked *