ಬೆಂಗಳೂರು : ಮಾಜಿ ಸಚಿವ ವರ್ತೂರು ಪ್ರಕಾಶ್ ಅವರಿಗೆ ಅವರ ಫೇಸ್‌ಬುಕ್ ಗೆಳತಿ ಶ್ವೇತಾಗೌಡ ಎಂಬಾಕೆನಿಂದ ಸಂಕಷ್ಟ ತಂದಿದ್ದು, ಚಿನ್ನದ ವ್ಯಾಪಾರಿಗೆ ಆಕೆ ಕೋಟ್ಯಂತರ ರೂಪಾಯಿ ವಂಚನೆ ಎಸಗಿದ ಪ್ರಕರಣದಲ್ಲಿ ಮಾಜಿ ಸಚಿವರಿಗೆ ಬಂಧನ ಭೀತಿ ಎದುರಾಗಿದೆ. ಇದೇ ಪ್ರಕರಣದಲ್ಲಿ ಮಾಜಿ ಸಚಿವ ವರ್ತೂರ್ ಪ್ರಕಾಶ್ ಅವರು ಪೊಲೀಸರ ಎದುರು ವಿಚಾರಣೆಗೆ ಹಾಜರಾಗಿದ್ದಾರೆ.
ಕಮರ್ಷಿಯಲ್ ಸ್ಟ್ರೀಟ್ ಠಾಣೆ ಪೊಲೀಸರು ಬಾಗಲಗುಂಟೆ ನಿವಾಸಿ ಶ್ವೇತಾ ಗೌಡ ಅವರನ್ನು ಬಂಧಿಸಿದ್ದರು. ಅವರಿಂದ ಚಿನ್ನ, ಕಾರು ಹಾಗೂ ಇತರೆ ವಸ್ತುಗಳನ್ನು ಜಪ್ತಿ ಮಾಡಿಕೊಳ್ಳಲಾಗಿತ್ತು. ಆರೋಪಿ ವಿಚಾರಣೆ ವೇಳೆ ವರ್ತೂರ್ ಪ್ರಕಾಶ್ ಅವರ ಹೆಸರು ಬಾಯ್ಬಿಟ್ಟಿದ್ದರು. ಆರೋಪಿ ಹೇಳಿಕೆ ಆಧರಿಸಿ ಪ್ರಕಾಶ್ ಅವರಿಗೆ ಮೂರು ಬಾರಿ ನೋಟಿಸ್ ನೀಡಲಾಗಿತ್ತು. ಇಂದು ವಿಚಾರಣೆಗೆ ಪ್ರಕಾಶ್ ಹಾಜರಾಗಿದ್ದು, ಎಸಿಪಿ ಗೀತಾ ಅವರ ನೇತೃತ್ವದಲ್ಲಿ ವಿಚಾರಣೆ ನಡೆಯುತ್ತಿದೆ. ತಾನು ವಂಚಿಸಿ ಸಂಪಾದಿಸಿದ್ದ ಚಿನ್ನದಲ್ಲಿ ವರ್ತೂರು ಪ್ರಕಾಶ್ ಅವರಿಗೆ ಸಹ ಪಾಲು ಕೊಟ್ಟಿದ್ದೇನೆ ಎಂದು ಮೂಲಗಳು ತಿಳಿಸಿವೆ.
ತಾನಾಗಿಯೇ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿ ಮಾಜಿ ಸಚಿವರನ್ನು ಸ್ನೇಹದ ಬಲೆಗೆ ಶ್ವೇತಾ ಬೀಳಿಸಿಕೊಂಡಿದ್ದಳು. ಬಳಿಕ ಫೇಸ್‌ಬುಕ್ ಮೆಸೆಂಜರ್‌ನಲ್ಲಿ ಪರಸ್ಪರ ಚಾಟಿಂಗ್ ಶುರುವಾಗಿದ್ದು, ಬಳಿಕ ಇಬ್ಬರ ನಡುವೆ ಮೊಬೈಲ್ ಸಂಖ್ಯೆ ವಿನಿಮಯವಾಗಿ ವಾಟ್ಸಾಪ್ ಮಾತುಕತೆ ಮುಂದುವರೆದಿತ್ತು. ಕಳೆದ ನಾಲ್ಕೈದು ತಿಂಗಳಿಂದ ಶ್ವೇತಾ ಹಾಗೂ ವರ್ತೂರು ಪ್ರಕಾಶ್ ನಡುವೆ ಆತ್ಮೀಯ ಒಡನಾಟವಿತ್ತು ಎಂದು ಹೇಳಲಾಗಿದೆ.
