ಬೆಂಗಳೂರು : 2025ರ ಹೊಸ ವರ್ಷಾಚರಣೆಗೆ ನಮ್ಮ ಮೆಟ್ರೋ ರೈಲು ನಿಗಮ ಸಿಹಿ ಸುದ್ದಿ ನೀಡಿದೆ. ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತವು (ಬಿಎಂಆರ್‌ಎಲ್) 2025ರ ಹೊಸ ವರ್ಷದ ಅಂಗವಾಗಿ ಮೆಟ್ರೋ ರೈಲು ಸೇವಾವಧಿಯನ್ನು ವಿಸ್ತರಿಸಿದ್ದು, ಮಧ್ಯರಾತ್ರಿ 2.40ರವರೆಗೂ ರೈಲು ಸೇವೆ ವಿಸ್ತರಿಸಿ ಪ್ರಕಟಣೆ ಹೊರಡಿಸಿದೆ.

ನೇರಳೆ ಮತ್ತು ಹಸಿರು ಮಾರ್ಗಗಳಲ್ಲಿ ಕೊನೆಯ ರೈಲು ಜ.1 ರಂದು ಮುಂಜಾನೆ 2 ಗಂಟೆಗೆ ಎಲ್ಲ ಟರ್ಮಿನಲ್‍ನ ನಿಲ್ದಾಣಗಳಿಂದ ಹೊರಡಲಿದ್ದು, ನಾಡಪ್ರಭು ಕೆಂಪೇಗೌಡ ಮೆಟ್ರೋ ನಿಲ್ದಾಣನಿಂದ (ಮೆಜೆಸ್ಟಿಕ್) ಕೊನೆಯ ರೈಲು ಎಲ್ಲ ನಾಲ್ಕು ದಿಕ್ಕುಗಳಿಗೆ ಮುಂಜಾನೆ 2:40 ಗಂಟೆಗೆ ಹೊರಡುತ್ತವೆ ಎಂದು ಬಿಎಂಆರ್‌ಸಿಎಲ್ ಮಾಹಿತಿ ನೀಡಿದೆ.

ಡಿಸೆಂಬರ್ 31ರ ರಾತ್ರಿ 11ರಿಂದ ಜನವರಿ 1 ಅಂದರೆ ಮುಂಜಾನೆ 2 ಗಂಟೆಯವರೆಗೆ 10 ನಿಮಿಷಗಳ ಮಧ್ಯಂತರದಲ್ಲಿ ರೈಲು ಕಾರ್ಯನಿರ್ವಹಿಸುತ್ತವೆ. ಆದರೆ ಎಂ.ಜಿ.ರಸ್ತೆಯಲ್ಲಿ ಜನಸಂದಣಿ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಡಿಸೆಂಬರ್ 31ರಂದು ರಾತ್ರಿ 11 ಗಂಟೆಯಿಂದ ಎಂ.ಜಿ. ರಸ್ತೆ ಮೆಟ್ರೋ ನಿಲ್ದಾಣದ ದ್ವಾರಗಳನ್ನು ಮುಚ್ಚಲಾಗುತ್ತದೆ. ಈ ಕಾರಣದಿಂದಾಗಿ ಪ್ರಯಾಣಿಕರು ಹತ್ತಿರದ ನಿಲ್ದಾಣಗಳಾದ ಟ್ರಿನಿಟಿ ಮತ್ತು ಕಬ್ಬನ್ ಪಾರ್ಕ್‍ನಲ್ಲಿ ರೈಲುಗಳು ನಿಲ್ಲುತ್ತವೆ ಎಂದು ಬಿಎಂಆರ್‌ಸಿಎಲ್ ಮಾಹಿತಿ ನೀಡಲಾಗಿದೆ.

ಟ್ರಿನಿಟಿ ಅಥವಾ ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣಗಳಿಂದ ಯಾವುದೇ ನಿಲ್ದಾಣಕ್ಕೆ ರಾತ್ರಿ 11 ಗಂಟೆಯ ನಂತರ ಪ್ರಯಾಣಿಸುವ ಪ್ರಯಾಣಿಕರು 50 ರೂ. ಬೆಲೆಯ ರಿಟರ್ನ್ ಜರ್ನಿ ಪೇಪರ್ ಟಿಕೇಟ್‍ ಅನ್ನು ಬಳಸಲು ಶೂಚಿಸಲಾಗಿದೆ. ಈ ಕಾಗದ ಟಿಕೇಟ್‍ ಅನ್ನು ಎಲ್ಲ ಮೆಟ್ರೋ ನಿಲ್ದಾಣಗಳಲ್ಲಿ ಡಿಸೆಂಬರ್ 31ರ ಬೆಳಗ್ಗೆ 8 ಗಂಟೆಯಿಂದ ಮುಂಗಡವಾಗಿ ಖರೀದಿಸಬಹುದಾಗಿದೆ ಎಂದು ಬಿಎಂಆರ್‌ಸಿಎಲ್ ತಿಳಿಸಿದೆ.

ಅಂತೆಯೇ ಸಾಮಾನ್ಯ ಕ್ಯೂಆರ್ ಕೋಡ್ ಟಿಕೆಟ್ ಮತ್ತು ಕಾರ್ಡ್‍ಗಳಿಂದ ಈ ನಿಲ್ದಾಣಗಳಿಂದ ಪ್ರಯಾಣಿಸಲು ಮಾನ್ಯವಾಗಿರುತ್ತವೆ. ವೈಟ್‍ಫೀಲ್ಡ್ ಮತ್ತು ರೇಷ್ಮೆ ಸಂಸ್ಥೆ ನಿಲ್ದಾಣಗಳ ಕಡೆಗೆ ಹೋಗುವವರು ಪ್ರಯಾಣಕ್ಕಾಗಿ ಟ್ರಿನಿಟಿ ಮೆಟ್ರೋ ನಿಲ್ದಾಣವನ್ನು ಬಳಸಬಹುದು. ಚಲ್ಲಘಟ್ಟ ಹಾಗೂ ಮಾದಾವರ ಕಡೆಗೆ ಪ್ರಯಾಣಿಸುವ ಪ್ರಯಾಣಿಕರು ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣವನ್ನು ಬಳಸಿಕೊಳ್ಳಬಹುದು ಎಂದು ಪ್ರಕಟಣೆಯಲ್ಲಿ ಬಿಎಂಆರ್‌ಸಿಎಲ್ ತಿಳಿಸಿದೆ.

Leave a Reply

Your email address will not be published. Required fields are marked *