Gruha Lakshmi Scheme Karnataka FAQ : ಕರ್ನಾಟಕ ಸರ್ಕಾರ ಪ್ರತಿ ಮನೆಯ ಯಜಮಾನಿಗೆ ಮಾಸಿಕ 2,000 ರೂ. ನೀಡುವ ಗೃಹಲಕ್ಷ್ಮೀ ಯೋಜನೆಯನ್ನು ಜಾರಿಗೆ ತಂದಿದೆ. ಜೂನ್ 15ರಿಂದ ಯೋಜನೆಗೆ ಅರ್ಜಿ ಸಲ್ಲಿಕೆಯೂ ಆರಂಭವಾಗಲಿದ್ದು, ಆಗಸ್ಟ್ 15ರ ಬಳಿಕ ಯೋಜನೆಗೆ ಚಾಲನೆ ಸಿಗಲಿದೆ. ಈ ಯೋಜನೆಗೆ ಸರ್ಕಾರ ಅನೇಕ ಷರತ್ತುಗಳನ್ನು ವಿಧಿಸಿದ್ದು, ಯೋಜನೆಯ ಸಂಪೂರ್ಣ ಮಾಹಿತಿ ಇಲ್ಲಿದೆ.
ಹೈಲೈಟ್ಸ್:
- ಆಗಸ್ಟ್ 15ರ ಬಳಿಕ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆ ಗೃಹಲಕ್ಷ್ಮೀ ಯೋಜನೆ ಜಾರಿ
- ಜೂನ್ 15ರಿಂದ ಜುಲೈ 15ರವರೆಗೆ ಅರ್ಜಿ ಸಲ್ಲಿಕೆಗೆ ಅವಧಿ ನಿಗದಿ
- ಆನ್ಲೈನ್ ಮತ್ತು ಭೌತಿಕವಾಗಿಯೂ ಅರ್ಜಿ ಸಲ್ಲಿಸಲು ಅವಕಾಶ
ಬೆಂಗಳೂರು : ಚುನಾವಣೆ ವೇಳೆ ಘೋಷಿಸಿದಂತೆ ಕಾಂಗ್ರೆಸ್ ಗೃಹಲಕ್ಷ್ಮೀ ಯೋಜನೆಯನ್ನು ಜಾರಿಗೊಳಿಸಲು ಮುಂದಾಗಿದೆ. ಕುಟುಂಬದ ಯಜಮಾನಿಗೆ ಪ್ರತಿ ತಿಂಗಳು 2,000 ರೂ. ನೀಡುವ ಯೋಜನೆ ಇದಾಗಿದ್ದು, ಆಗಸ್ಟ್ 15ರ ಬಳಿಕ ಜಾರಿಯಾಗಲಿದೆ. ಈಗಾಗಲೇ ಸಿಎಂ ಸಿದ್ದರಾಮಯ್ಯ ನೇತೃತ್ವದ ಸಚಿವ ಸಂಪುಟದಲ್ಲಿ ಯೋಜನೆಗೆ ಒಪ್ಪಿಗೆ ಸಿಕ್ಕಿದ್ದು, ಜೂನ್ 15 ರಿಂದ ಯೋಜನೆಗೆ ಅರ್ಜಿ ಸಲ್ಲಿಕೆ ಕೂಡ ಪ್ರಾರಂಭವಾಗಲಿದೆ.
ಗೃಹಲಕ್ಷ್ಮೀ ಯೋಜನೆಗೆ ಅನೇಕ ಷರತ್ತುಗಳನ್ನು ಸರ್ಕಾರ ವಿಧಿಸಿದೆ. ಒಂದು ಕುಟುಂಬದಲ್ಲಿ ಒಬ್ಬರಿಗೆ ಮಾತ್ರ ಯೋಜನೆಯ ಲಾಭ ಸಿಗಲಿದ್ದು, ಅರ್ಜಿ ಸಲ್ಲಿಕೆ ಹೇಗೆ? ಯಾರು ಅರ್ಹರು? ಯೋಜನೆ ಜಾರಿ ಯಾವಾಗಿನಿಂದ? ಯಾವ್ಯಾವ ದಾಖಲೆಗಳನ್ನು ಹೊಂದಿರುಬೇಕು? ಗೃಹಿಣಿಯರ ಖಾತೆಗೆ ಹಣ ಯಾವಾಗ ಬರುತ್ತದೆ ಎಂಬ ಪ್ರಶ್ನೆಗಳು ಸೇರಿ ಅನೇಕ ಗೊಂದಲಗಳಿಗೆ ಇಲ್ಲಿ ಉತ್ತರ ನೀಡುವ ಪ್ರಯತ್ನವನ್ನು ಮಾಡಲಾಗಿದೆ.
- ಏನಿದು ಗೃಹಲಕ್ಷ್ಮೀ ಯೋಜನೆ?
ಪ್ರತಿ ಮನೆಯ ಯಜಮಾನಿಗೆ ಮಾಸಿಕ 2,000 ರೂ. ನೀಡುವ ಯೋಜನೆಯೇ ಗೃಹಲಕ್ಷ್ಮೀ ಯೋಜನೆ. ಚುನಾವಣೆಗೂ ಮುನ್ನ ಕಾಂಗ್ರೆಸ್ ಘೋಷಿಸಿದ ಗ್ಯಾರಂಟಿಗಳ ಪೈಕಿ ಗೃಹಲಕ್ಷ್ಮೀ ಯೋಜನೆ ಕೂಡ ಒಂದು. ಈಗ ಅಧಿಕಾರಕ್ಕೆ ಬಂದ ಹಿನ್ನೆಲೆ ಕಾಂಗ್ರೆಸ್ ಸರ್ಕಾರ ಈ ಯೋಜನೆಯನ್ನು ಜಾರಿಗೆ ತರುತ್ತಿದೆ. - ಗೃಹಲಕ್ಷ್ಮೀ ಯೋಜನೆ ಜಾರಿ ಯಾವಾಗ?
ಗೃಹಲಕ್ಷ್ಮೀ ಯೋಜನೆ ಆಗಸ್ಟ್ 17 ಅಥವಾ 18ರಂದು ಜಾರಿಗೆ ಬರಲಿದೆ. ಬೆಳಗಾವಿ ಜಿಲ್ಲೆಯ ಕಿತ್ತೂರಿನಲ್ಲಿ ಗೃಹಲಕ್ಷ್ಮೀ ಯೋಜನೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಈ ವೇಳೆ ಇರಲಿದ್ದಾರೆ. - ಗೃಹಲಕ್ಷ್ಮೀ ಯೋಜನೆಗೆ ಯಾರು ಅರ್ಹರು?
ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ವಿತರಿಸುವ ಅಂತ್ಯೋದಯ, ಬಿಪಿಎಲ್ ಮತ್ತು ಎಪಿಎಲ್ ಪಡಿತರ ಚೀಟಿಗಳಲ್ಲಿ ಕುಟುಂಬದ ಯಜಮಾನಿ ಎಂದು ನಮೂದಿಸಿರುವ ಮಹಿಳೆ ಮಾತ್ರ ಗೃಹಲಕ್ಷ್ಮೀ ಯೋಜನೆಯ ಫಲಾನುಭವಿಯಾಗಲು ಅರ್ಹರಾಗಿರುತ್ತಾರೆ. - ಯೋಜನೆಯ ಲಾಭ ಪಡೆಯಲು ಅರ್ಜಿ ಸಲ್ಲಿಸಬೇಕಾ?
ಹೌದು, ಗೃಹಲಕ್ಷ್ಮೀ ಯೋಜನೆಯ ಫಲಾನುಭವಿಗಳಾಗಲು ಅರ್ಜಿಯನ್ನು ಸಲ್ಲಿಸಬೇಕು. ಆನ್ಲೈನ್ ಅಥವಾ ಭೌತಿಕವಾಗಿಯಾದರೂ ಅರ್ಜಿ ಸಲ್ಲಿಸಬಹುದು. - ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಕೆ ಪ್ರಾರಂಭ ಯಾವಾಗ?
ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಕೆ ಜೂನ್ 15 ರಿಂದ ಆರಂಭವಾಗಲಿದೆ. ಜುಲೈ 15ರವರೆಗೆ ಅರ್ಜಿ ಸಲ್ಲಿಸಬಹುದಾಗಿದ್ದು, ಬಳಿಕ ಅರ್ಜಿಗಳು ಮತ್ತು ದಾಖಲೆಗಳನ್ನು ಪರಿಶೀಲನೆ ನಡೆಸಿ ಫಲಾನುಭವಿಗಳ ಆಯ್ಕೆ ಆಗುತ್ತದೆ. - ಯೋಜನೆಗೆ ಎಲ್ಲಿ ಅರ್ಜಿ ಸಲ್ಲಿಸಬಹುದು?
ಗೃಹಲಕ್ಷ್ಮೀ ಯೋಜನೆಗೆ ಸರ್ಕಾರದ ಸೇವಾಸಿಂಧು ಪೋರ್ಟಲ್ನಲ್ಲಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಅಥವಾ ಭೌತಿಕವಾಗಿಯಾದರೂ ಅರ್ಜಿ ಸಲ್ಲಿಸಬಹುದು. ಗ್ರಾಮ ಒನ್, ಕರ್ನಾಟಕ ಒನ್, ಬೆಂಗಳೂರು ಒನ್ ಕೇಂದ್ರಗಳಲ್ಲಿ ಭೌತಿಕವಾಗಿ ಅರ್ಜಿ ಸಲ್ಲಿಸುವ ಆಯ್ಕೆಯನ್ನು ಸರ್ಕಾರ ನೀಡಿದೆ. - ಗೃಹಲಕ್ಷ್ಮೀ ಯೋಜನೆಗೆ ಬೇಕಾಗುವ ದಾಖಲೆಗಳು ಏನು?
ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸಲು ಈ ಕೆಳಗಿನ ದಾಖಲೆಗಳನ್ನು ಹೊಂದಿರಲೇಬೇಕು.1. ರೇಷನ್ ಕಾರ್ಡ್2. ಬ್ಯಾಂಕ್ ಪಾಸ್ಬುಕ್3. ಆಧಾರ್ ಕಾರ್ಡ್4. ಯಾವುದಾದರೂ ಗುರುತಿನ ಚೀಟಿ - ಒಂದೇ ಕುಟುಂಬದಲ್ಲಿ ಒಂದಕ್ಕಿಂತ ಹೆಚ್ಚು ಮಹಿಳೆಯರಿದ್ದರೆ ಏನಾಗುತ್ತದೆ?
ಕುಟುಂಬದ ಎಲ್ಲ ಮಹಿಳೆಯರಿಗೂ ಈ ಯೋಜನೆ ಅನ್ವಯ ಆಗಲ್ಲ. ಒಂದೇ ಕುಟುಂಬದಲ್ಲಿ ಒಂದಕ್ಕಿಂತ ಹೆಚ್ಚು ಮಹಿಳೆಯರಿದ್ದರೆ ಒಬ್ಬರಿಗೆ ಮಾತ್ರ ಗೃಹಲಕ್ಷ್ಮೀ ಯೋಜನೆ ಅನ್ವಯವಾಗುತ್ತದೆ. - ಯೋಜನೆಗೆ ಅರ್ಜಿ ಸಲ್ಲಿಸಲು ರೇಷನ್ ಕಾರ್ಡ್ ಬೇಕೇ ಬೇಕಾ?
ಹೌದು, ಗೃಹಲಕ್ಷ್ಮೀ ಯೋಜನೆಯಡಿ 2,000 ರೂ. ಪಡೆಯಲು ಎಪಿಎಲ್, ಬಿಪಿಎಲ್, ಅಂತ್ಯೋದಯ ಕಾರ್ಡ್ ಸೇರಿ ಯಾವುದಾದರೂ ಒಂದು ಇರಲೇಬೇಕು. ಇಲ್ಲದಿದ್ದರೆ ಯೋಜನೆಯ ಲಾಭ ಸಿಗದು. - ಏನಾದರೂ ಶುಲ್ಕವಿದೆಯಾ?
ಗೃಹಲಕ್ಷ್ಮೀ ಯೋಜನೆಯ ಲಾಭ ಪಡೆಯಲು ಯಾವುದೇ ರೀತಿಯ ಶುಲ್ಕ ಪಾವತಿಸುವಂತಿಲ್ಲ. ಯೋಜನೆಯ ಫಲಾನುಭವಿಗಳಾಗಲೂ ಯಾರಿಗೂ ದುಡ್ಡು ಕೊಡಬೇಕಾದ ಅಗತ್ಯವೂ ಇಲ್ಲ. - ತೆರಿಗೆ ಪಾವತಿಸುತ್ತಿದ್ದರೆ ಯೋಜನೆಗೆ ಅರ್ಹರಾಗ್ತೀವಾ?
ಇಲ್ಲ, ತೆರಿಗೆ ಪಾವತಿಸುತ್ತಿದ್ದರೆ ಅವರು ಯೋಜನೆಗೆ ಅರ್ಹರಾಗುವುದಿಲ್ಲ. ಕೇವಲ ಮನೆಯೊಡತೆಯಷ್ಟೇ ಅಲ್ಲ, ಆಕೆಯ ಪತಿ ಮತ್ತು ಮಕ್ಕಳು ಯಾರೇ ತೆರಿಗೆ ಪಾವತಿಸುತ್ತಿದ್ದರೂ ಅವರಿಗೆ ಗೃಹಲಕ್ಷ್ಮೀ ಯೋಜನೆ ಅನ್ವಯ ಆಗುವುದಿಲ್ಲ. - ರೇಷನ್ ಕಾರ್ಡ್ಗೆ ಅರ್ಜಿ ಸಲ್ಲಿಸಿ, ಕಾರ್ಡ್ಗಾಗಿ ಕಾಯುತ್ತಿರುವವರು ಅರ್ಹರೇ?
ಇಲ್ಲ, ಸದ್ಯದ ಮಾರ್ಗಸೂಚಿ ಪ್ರಕಾರ ರೇಷನ್ ಕಾರ್ಡ್ಗೆ ಅರ್ಜಿ ಸಲ್ಲಿಸಿ ಕಾರ್ಡ್ಗಾಗಿ ಕಾಯುತ್ತಿರುವವರು ಗೃಹಲಕ್ಷ್ಮೀ ಯೋಜನೆಗೆ ಅರ್ಹರಲ್ಲ. ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಈ ಬಗ್ಗೆ ಪರಿಶೀಲಿಸುತ್ತೇವೆ ಎಂದು ಹೇಳಿದ್ದು, ಮುಂದೆ ರೇಷನ್ ಕಾರ್ಡ್ಗೆ ಅರ್ಜಿ ಸಲ್ಲಿಸಿದವರಿಗೂ ಸೌಲಭ್ಯ ಸಿಗಬಹುದು. - ಜಿಎಸ್ಟಿ ರಿಟರ್ನ್ಸ್ ಸಲ್ಲಿಸುವವರು ಅರ್ಹರಾ?
ಇಲ್ಲ, ಜಿಎಸ್ಟಿ ರಿಟರ್ನ್ಸ್ ಸಲ್ಲಿಸುವವರು ಕೂಡ ಗೃಹಲಕ್ಷ್ಮೀ ಯೋಜನೆಗೆ ಅರ್ಹರಾಗುವುದಿಲ್ಲ. ಮನೆಯೊಡತಿ ಅಷ್ಟೇ ಅಲ್ಲದೇ ಅವರ ಪತಿ ಕೂಡ ಜಿಎಸ್ಟಿ ರಿಟರ್ನ್ಸ್ ಸಲ್ಲಿಸಬಾರದು ಎಂಬ ನಿಯಮ ಇದೆ. - ಬ್ಯಾಂಕ್-ಆಧಾರ್ ಜೋಡಣೆ ಕಡ್ಡಾಯವಾ?
ಹೌದು, ಈ ಯೋಜನೆಯ ಲಾಭ ಪಡೆಯಲು ಮನೆಯೊಡತಿಯ ಬ್ಯಾಂಕ್ ಹಾಗೂ ಆಧಾರ್ ಕಾರ್ಡ್ ಅನ್ನು ಜೋಡಣೆ ಮಾಡಿರಲೇಬೇಕು. - ಫಲಾನುಭವಿಗಳಿಗೆ ಹಣ ಹೇಗೆ ತಲುಪುತ್ತದೆ?
ಗೃಹಲಕ್ಷ್ಮೀ ಯೋಜನೆಯ ಫಲಾನುಭವಿಗಳಿಗೆ ಯೋಜನೆಯ ಹಣ ಮಾಸಿಕ 2,000 ರೂ. ಡಿಬಿಟಿ ಮೂಲಕ ಅರ್ಹ ಫಲಾನುಭವಿಗಳ ಖಾತೆಗೆ ವರ್ಗಾವಣೆಯಾಗುತ್ತದೆ. - ತಪ್ಪು ಮಾಹಿತಿ ನೀಡಿದರೆ ಏನಾಗುತ್ತದೆ?
ಯೋಜನೆಯ ಲಾಭ ಪಡೆಯಲು ತಪ್ಪು ಮಾಹಿತಿ ನೀಡಿದರೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಸರ್ಕಾರ ಹೇಳಿದೆ. ಯೋಜನೆಗೆ ಅರ್ಜಿ ಸಲ್ಲಿಸುವರಿಗೆ ಸ್ವಯಂ ಘೋಷಣೆ ಆಧಾರದ ಮೇಲೆ ಹಣವನ್ನು ಮಂಜೂರು ಮಾಡಲಾಗುತ್ತದೆ. ಅರ್ಜಿಯಲ್ಲಿನ ಅಂಶಗಳ ಬಗ್ಗೆ ಬಳಿಕ ಪರಿಶೀಲಿಸಲಾಗುತ್ತದೆ. ತಪ್ಪು ಮಾಹಿತಿ ನೀಡಿ ಸೌಲಭ್ಯ ಪಡೆದಿರುವುದು ಕಂಡುಬಂದಲ್ಲಿ, ಈಗಾಗಲೇ ಪಾವತಿಸಲಾಗಿರುವ ಹಣವನ್ನು ಅರ್ಜಿದಾರರಿಂದ ವಸೂಲು ಮಾಡಲಾಗುತ್ತದೆ. ಜೊತೆಗೆ ಅಂತಹವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ.