ಬೆಂಗಳೂರು : ಮಲೇಷ್ಯಾದಿಂದ ಬೆಂಗಳೂರಿಗೆ ಕಳ್ಳಸಾಗಣೆಯಾಗುತ್ತಿದ್ದ ಅಳಿವಿನಂಚಿನಲ್ಲಿರುವ 379 ವನ್ಯಜೀವಿಗಳನ್ನು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ರಕ್ಷಣೆ ಮಾಡಿದ್ದಾರೆ.
379 ಪ್ರಾಣಿಗಳನ್ನು ಸೂಟ್ಕೇಸ್ ಮೂಲಕ ಬಾಟಿಕ್ ಏರ್ ಮಲೇಷ್ಯಾ ವಿಮಾನದ ಮೂಲಕ ಬೆಂಗಳೂರಿಗೆ ಸಾಗಿಸಲಾಗಿತ್ತು. 275 ಗ್ರೀನ್ ಇಗುವಾನಾ. 91 ಫ್ರಾಗ್ ಪ್ಯಾಕ್ ಮ್ಯಾನ್ಸ್, 20 ಆಫ್ರಿಕನ್ ಸ್ಪರ್ಡ್ ಆಮೆ, 1 ಗೆಕ್ಕೋ ಪತ್ತೆಯಾಗಿವೆ. 8 ಕಪ್ಪೆಗಳೂ ಮೃತಪಟ್ಟಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ವಿಮಾನವು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 2 ತಲುಪಿದ ನಂತರ, ಗುಪ್ತಚರ ಸುಳಿವು ಆಧರಿಸಿ ಲಗೇಜ್ ಗಳನ್ನು ಪರಿಶೀಲನೆ ನಡೆಸಿದಾಗ ಪ್ರಯಾಣಿಕರೋರ್ವರ ಸೂಟ್ ಕೇಸ್ ನಲ್ಲಿ 379 ಪ್ರಾಣಿಗಳು ಪತ್ತೆಯಾಗಿವೆ.
ಪ್ರಾಣಿಗಳು ಅತ್ಯಂತ ಚಿಕ್ಕದಾಗದ್ದು, ವಸ್ತುಗಳೊಂದಿಗೆ ಸೂಟ್ ಕೇಸ್ ನಲ್ಲಿ ಬಟ್ಟೆಯಲ್ಲಿ ತುಂಬಿರುವುದು ಕಂಡು ಬಂದಿತ್ತು. ಒಂದೇ ಸೂಟ್ ಕೇಸ್ ನಲ್ಲಿ ಎಲ್ಲವನ್ನೂ ತುಂಬಲಾಗಿದ್ದು, ಕೆಲ ಕಪ್ಪೆಗಳು ಉಸಿರುಗಟ್ಟಿ ಸಾವನ್ನಪ್ಪಿವೆ ಎಂದು ಮಾಹಿತಿ ತಿಳಿದಿದೆ.
ಈ ಪ್ರಾಣಿಗಳನ್ನು ಮಲೇಷ್ಯಾ ಮತ್ತು ಥೈಲ್ಯಾಂಡ್ನಿಂದ ಕಳ್ಳಸಾಗಣೆ ಮಾಡಲಾಗಿದೆ. ಏಷ್ಯಾದ ದೇಶಗಳಿಂದ ಚೆನ್ನೈ ವಿಮಾನ ನಿಲ್ದಾಣಕ್ಕೆ ವನ್ಯಜೀವಿಗಳ ಕಳ್ಳಸಾಗಣೆ ಮಾಡಲಾಗುತ್ತಿತ್ತು. ಇದೀಗ ಬೆಂಗಳೂರು ವಿಮಾನದ ಮೂಲಕವೂ ಆರಂಭಿಸಿದ್ದಾರೆ.
ರಕ್ಷಣೆ ಮಾಡಲಾಗಿರುವ ವನ್ಯಜೀವಿಗಳನ್ನು ಮಲೇಷ್ಯಾಗೆ ರವಾನೆ ಮಾಡಲಾಗುತ್ತಿದೆ. ಪ್ರಾಣಿ ಕಲ್ಯಾಣ ಸಂಸ್ಥೆಗಳು ಮತ್ತು ಎನ್ಜಿಒಗಳಿಗೆ ಮಾಹಿತಿ ನೀಡಲಾಗಿದ್ದು, ಪ್ರಾಣಿಗಳ ರಕ್ಷಣೆಗೆ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಅಧಿಕಾರಿಗಳಿಗೆ ಸಹಾಯ ಮಾಡುತ್ತಿದ್ದಾರೆಂದು ಮೂಲಗಳಿಂದ ವರದಿಯಾಗಿದೆ.