‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಚಿತ್ರದ ವಿವಾದಕ್ಕೆ ಸಂಬಂಧಿಸಿದ ಕೇಸ್ ವಿಚಾರಣೆಗೆ ಬೆಂಗಳೂರಿನ ಕಮರ್ಷಿಯಲ್ ಕೋರ್ಟ್‌ಗೆ ಇಂದು ನಟಿ ರಮ್ಯಾ ಹಾಜರಾಗಿದ್ದಾರೆ.
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಚಿತ್ರದಲ್ಲಿ ಕೆಲ ದೃಶ್ಯಗಳನ್ನು ತಮ್ಮ ಅನುಮತಿ ಇಲ್ಲದೆ ಬಳಸಲಾಗಿದೆ. ಇದರಿಂದ ತಮಗೆ ಆಗಿರುವ ನಷ್ಟವನ್ನು ತುಂಬಿಕೊಡಬೇಕು ಎಂದು ನಟಿ ಚಿತ್ರತಂಡದ ಮೇಲೆ ಕೇಸ್ ಹಾಕಿದ್ದರು.
ಒಂದು ಕೋಟಿ ರೂ. ಪರಿಹಾರ ಕೇಳಿ ನಟಿ ಕೋರ್ಟ್ ಮೊರೆ ಹೋಗಿದ್ದರು. ಇದೀಗ ಪ್ರಕರಣದ ವಿಚಾರಣೆಗೆ ಸಂಬಂಧ ಬೆಂಗಳೂರಿನ ಕಮರ್ಷಿಯಲ್ ಕೋರ್ಟ್‌ಗೆ ರಮ್ಯಾ ಹಾಜರಾಗಿದ್ದಾರೆ.
ಕೋರ್ಟ್ ವಿಚಾರಣೆಯ ಬಳಿಕ ರಮ್ಯಾ ಮಾತನಾಡಿ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್ ಕೆಲ ದಾಖಲೆಗಳನ್ನು ನೀಡಲು ಹೇಳಿತ್ತು. ಅವರು ಕೇಳಿದ್ದ ಎಲ್ಲಾ ದಾಖಲೆಗಳನ್ನು ಕೊಟ್ಟಿದ್ದೇನೆ. ನೇರವಾಗಿ ಬಂದು ಕೊಡೋಕೆ ಹೇಳಿದ್ದರು. ಹಾಗಾಗಿ ವಿಚಾರಣೆಗೆ ಬಂದಿದ್ದೇನೆ.
ಈ ಪ್ರಕರಣ ಕೋರ್ಟ್‌ನಲ್ಲಿರುವ ಕಾರಣಕ್ಕೆ ಹೆಚ್ಚೇನು ಮಾತನಾಡಲ್ಲ ಎಂದರು. ಇದೇ ವೇಳೆ, ಮತ್ತೆ ಸಿನಿಮಾ ಮಾಡುವ ಬಗ್ಗೆ ಪ್ರತಿಕ್ರಿಯೆ ನೀಡಿ, ಒಳ್ಳೆಯ ಕಥೆ ಸಿಕ್ಕರೆ ಆದಷ್ಟು ಬೇಗ ಬರುತ್ತೇನೆ ಎಂದು ರಮ್ಯಾ ಮಾತನಾಡಿದ್ದಾರೆ. ಜೊತೆಗೆ ರಾಜಕೀಯಕ್ಕೆ ಬರುವ ಆಲೋಚನೆ ಇಲ್ಲ ಎಂದು ನಟಿ ತಿಳಿಸಿದ್ದಾರೆ. ಜನವರಿ 15ಕ್ಕೆ ಒರಿಜಿನಲ್ ಅಗ್ರಿಮೆಂಟ್ ಕಾಪಿ ಜೊತೆಗೆ ಕೋರ್ಟ್‌ಗೆ ಬರಲು ರಮ್ಯಾಗೆ ಸೂಚನೆ ನೀಡಲಾಗಿದೆ.