ಬೆಂಗಳೂರು : ತಾಯಂದಿರ ಮರಣ ತಡೆಗೆ ತಮ್ಮ ಸರ್ಕಾರ ಶೀಘ್ರದಲ್ಲೇ ಕೇಂದ್ರೀಕೃತ ಅಭಿಯಾನವನ್ನು ಪ್ರಾರಂಭಿಸಲಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ಆರೋಗ್ಯ ಇಲಾಖೆಯ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ರಾಷ್ಟ್ರಕ್ಕೆ ಹೋಲಿಸಿದರೆ ರಾಜ್ಯದಲ್ಲಿ ತಾಯಂದಿರ ಮರಣ ಪ್ರಮಾಣ ಕಡಿಮೆ ಇದೆ. 2018-20ರ ಅವಧಿಯಲ್ಲಿ ಮರಣ ಪ್ರಮಾಣ ಲಕ್ಷಕ್ಕೆ 69 ಇತ್ತು. ಈಗಲೂ ದೇಶದ ಅನುಪಾತ 97 ಇದೆ. 2022-24ರ ಅವಧಿಯಲ್ಲಿ ರಾಜ್ಯದಲ್ಲಿ ಮರಣ ಪ್ರಮಾಣ 55ಕ್ಕೆ ಇಳಿದಿದೆ ಎಂದು ಹೇಳಿದರು.

ಪ್ರಸಕ್ತ ಸಾಲಿನಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ 11,182 ಕೋಟಿ ರೂ.ಅನುದಾನ ಒದಗಿಸಲಾಗಿದೆ. ಇದುವರೆಗೆ 6,593 ಕೋಟಿ ರೂ.ವೆಚ್ಚ ಮಾಡಲಾಗಿದೆ. ನಿಧಿ ಬಳಕೆಯಲ್ಲಿ ಶೇ.58.96ರಷ್ಟು ಪ್ರಗತಿ ಸಾಧಿಸಲಾಗಿದೆ. ಹೆರಿಗೆ ಪ್ರಮಾಣಕ್ಕೆ ಅನುಗುಣವಾಗಿ ಆಸ್ಪತ್ರೆಗಳಲ್ಲಿ ಪ್ರಸೂತಿ ಮತ್ತು ಅರಿವಳಿಕೆ ತಜ್ಞರನ್ನು ನೇಮಕ ಮಾಡಬೇಕು. ಹೆರಿಗೆ ಪ್ರಮಾಣ ಕಡಿಮೆ ಇರುವ ಆಸ್ಪತ್ರೆಗಳ ವೈದ್ಯರನ್ನು ಅಗತ್ಯ ಇರುವ ಕಡೆ ನಿಯೋಜಿಸಬೇಕು. ತಾಲೂಕು ಆಸ್ಪತ್ರೆಗಳಲ್ಲಿ ತಜ್ಞ ವೈದ್ಯರ ಲಭ್ಯತೆ ಖಾತರಿಪಡಿಸಬೇಕು ಎಂದು ಸೂಚಿಸಿದರು.

ಹೆಣ್ಣು ಭ್ರೂಣ ಹತ್ಯೆ ತಡೆಗೆ ಸಂಬಂಧಪಟ್ಟ ಇಲಾಖೆಗಳ ನಡುವೆ ಉತ್ತಮ ಸಮನ್ವಯತೆಯೊಂದಿಗೆ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುವುದು. ಹೆಣ್ಣು ಭ್ರೂಣ ಹತ್ಯೆ ತಡೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ನಮ್ಮ ಕ್ಲಿನಿಕ್‌ಗಳನ್ನು ಬಲಪಡಿಸಬೇಕು. ಸರ್ಕಾರಿ ಆಸ್ಪತ್ರೆಗಳಲ್ಲಿ ಉತ್ತಮ ಚಿಕಿತ್ಸೆ ದೊರೆತರೆ ಮಾತ್ರ ಖಾಸಗಿ ಆಸ್ಪತ್ರೆಗಳ ಮೇಲಿನ ಅವಲಂಬನೆ ಕಡಿಮೆ ಮಾಡಬಹುದು ಎಂದರು. ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಅಡಿಯ ಪ್ಯಾಕೇಜ್‌ಗಳ ಪರಿಶೀಲನೆ ನಡೆಸಲಾಗುವುದು.

ಆರೋಗ್ಯ ಇಲಾಖೆಯಲ್ಲಿ ಖಾಲಿ ಇರುವ 3,927 ಎಎನ್‌ಎಂ ಹುದ್ದೆಗಳಲ್ಲಿ 1,205 ಹಾಗೂ 2,990 ಎಚ್‌ಐಒ ಹುದ್ದೆಗಳಲ್ಲಿ 300 ಹುದ್ದೆಗಳನ್ನು ಭರ್ತಿ ಮಾಡಲು ಆರ್ಥಿಕ ಇಲಾಖೆ ಅನುಮೋದನೆ ನೀಡಿದೆ. ಇದೇ ವೇಳೆ ಅಗತ್ಯ ಸೇವಾ ವಿಭಾಗಗಳಲ್ಲಿನ ಖಾಲಿ ಹುದ್ದೆಗಳನ್ನು ಯಾವುದೇ ವಿಳಂಬವಿಲ್ಲದೆ ಭರ್ತಿ ಮಾಡಬೇಕು ಎಂದು ಸೂಚನೆ ನೀಡಿದರು.

Leave a Reply

Your email address will not be published. Required fields are marked *