ಆಂಧ್ರ ಪ್ರದೇಶ : ಆಂಧ್ರ ಪ್ರದೇಶದ ಪ್ರಸಿದ್ಧ ತಿರುಪತಿ ತಿರುಮಲ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ನಿನ್ನೆ ರಾತ್ರಿ ಸಂಭವಿಸಿದ ಕಾಲ್ತುಳಿತದಲ್ಲಿ 6 ಮಂದಿ ಭಕ್ತರು ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ ಸಿಎಂ ಎನ್ ಚಂದ್ರಬಾಬು ನಾಯ್ಡು ಪ್ರತಿಕ್ರಿಯಿಸಿ, ಇಂದು ಸಿಎಂ ಚಂದ್ರಬಾಬು ನಾಯ್ಡು ತಿರುಪತಿಗೆ ಭೇಟಿ ನೀಡಲಿದ್ದಾರೆ.
ತಿರುಮಲ ಶ್ರೀವಾರಿ ವೈಕುಂಠ ದ್ವಾರ ದರ್ಶನಕ್ಕೆ ಟೋಕನ್ ವಿಚಾರದಲ್ಲಿ ತಿರುಪತಿಯಲ್ಲಿರುವ ವಿಷ್ಣು ನಿವಾಸದ ಬಳಿ ಕಾಲ್ತುಳಿತ ಸಂಭವಿಸಿ ಹಲವಾರು ಭಕ್ತರು ಮೃತಪಟ್ಟಿರುವುದು ಆಘಾತಕ್ಕೀಡು ಮಾಡಿದೆ. ಭಕ್ತರು ಟೋಕನ್ ಸಂಗ್ರಹಿಸಲು ಹೆಚ್ಚಿನ ಸಂಖ್ಯೆಯಲ್ಲಿ ಸೇರುತ್ತಿದ್ದ ಸಮಯದಲ್ಲಿ ನಡೆದ ಈ ದುರಂತ ಘಟನೆ ನನ್ನನ್ನು ತುಂಬಾ ನೋಯಿಸಿತು.
ಕೆಲವು ಜನರ ಸ್ಥಿತಿ ಗಂಭೀರವಾಗಿದೆ, ಉನ್ನತ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಪರಿಹಾರ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಲಾಗಿದೆ. ಗಾಯಾಳುಗಳಿಗೆ ಉತ್ತಮ ವೈದ್ಯಕೀಯ ಚಿಕಿತ್ಸೆ ನೀಡಲು ಆದೇಶಿಸಿದ್ದೇನೆ. ಪರಿಸ್ಥಿತಿ ಬಗ್ಗೆ ನಿರಂತರವಾಗಿ ಜಿಲ್ಲಾ ಮತ್ತು ಟಿಟಿಡಿ ಅಧಿಕಾರಿಗಳೊಂದಿಗೆ ಮಾತನಾಡುತ್ತಿದ್ದೇನೆ ಎಂದಿದ್ದಾರೆ.
ಈ ಘಟನೆಯಲ್ಲಿ ಇನ್ನೂ ನಾಲ್ವರು ತೀವ್ರ ಅಸ್ವಸ್ಥಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸುಮಾರು 40 ಮಂದಿ ಗಾಯಗೊಂಡಿದ್ದಾರೆ. ವೈಕುಂಠ ಏಕಾದಶಿ ಪ್ರಯುಕ್ತ ತಿರುಪತಿಯ ವಿಷ್ಣು ನಿವಾಸಂನಲ್ಲಿ ಶುಕ್ರವಾರದಿಂದ 10 ದಿನಗಳ ಕಾಲ ವೈಕುಂಠ ದ್ವಾರ ಸರ್ವ ದರ್ಶನಕ್ಕಾಗಿ ಟೋಕನ್ ವಿತರಣೆಯ ಸಂದರ್ಭದಲ್ಲಿ ಕಾಲ್ತುಳಿತ ಸಂಭವಿಸಿದೆ.