ಬೆಂಗಳೂರು : ಆರೋಗ್ಯ ಸಚಿವರ ಸಂಧಾನ ವಿಫಲವಾಗಿದ್ದು ಕೊರೆಯುವ ಚಳಿಯಲ್ಲೂ ಪುಟ್ಟ ಮಕ್ಕಳನ್ನು ಹಿಡಿದುಕೊಂಡು ಆಶಾ ಕಾರ್ಯಕರ್ತೆಯರು ನಡೆಸುತ್ತಿರುವ ಪ್ರತಿಭಟನೆ ಮೂರನೇ ದಿನಕ್ಕೆ ಕಾಲಿಟ್ಟಿದೆ. ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಸರ್ಕಾರದ ವಿರುದ್ದ ಆಶಾ ಕಾರ್ಯಕರ್ತೆಯರು ಫ್ರೀಡಂಪಾರ್ಕ್ನಲ್ಲಿ ಅಹೋರಾತ್ರಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಈ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ್ದ, ಸಚಿವ ದಿನೇಶ್ ಗುಂಡೂರಾವ್ ಮಾಸಿಕ 8 ಸಾವಿರ ರೂ. ಬದಲಿಗೆ 9,500 ರೂಪಾಯಿ ನೀಡುವ ಭರವಸೆ ನೀಡಿದ್ದರು. ಆದರೆ ಸಚಿವರ ಭರವಸೆ ಒಪ್ಪದ ಕಾರ್ಯಕರ್ತರು ಕನಿಷ್ಠ 15 ಸಾವಿರ ರೂ. ಗೌರವಧನ ನೀಡುವಂತೆ ಪಟ್ಟು ಹಿಡಿದಿದ್ದಾರೆ.
ಆಶಾ ಕಾರ್ಯಕರ್ತೆಯರ ಬೇಡಿಕೆಗಳು ಹೀಗಿದೆ:
- ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಆಶಾ ಕಾರ್ಯಕರ್ತೆಯರಿಗೆ ಇರುವ ಗೌರವಧನ ಮತ್ತು ಪ್ರೋತ್ಸಾಹಧನ ಸೇರಿಸಿ ಒಟ್ಟು 15,000 ಮಾಸಿಕ ಗೌರವಧನ ನೀಡಬೇಕು.
- ನಗರ ಆಶಾ ಕಾರ್ಯಕರ್ತೆಯರ ಹೆಚ್ಚುವರಿ ಕೆಲಸ ಮತ್ತು ನಗರ ಜೀವನದ ದುಬಾರಿ ಖರ್ಚು ವೆಚ್ಚಗಳಿಗೆ ಅನುಗುಣವಾಗಿ ಕನಿಷ್ಠ 2 ಸಾವಿರ ರೂಪಾಯಿ ಗೌರವಧನವನ್ನು ಹೆಚ್ಚಿಸಬೇಕು.
- ಆಶಾ ಕಾರ್ಯಕರ್ತೆಯರು ಸ್ಮಾರ್ಟ್ ಫೋನ್ ಬಳಕೆ ಬಗ್ಗೆ ಹೊರಡಿಸಿದ ಅಧಿಕೃತ ಜ್ಞಾಪನಾ ಪತ್ರ ಕೂಡಲೇ ಹಿಂತೆಗೆದುಕೊಳ್ಳಬೇಕು.
- ಅಧಿಕೃತವಾಗಿ ಆಶಾಗಳದಲ್ಲದ ಕೆಲಸವನ್ನು ಮಾಡಲು ಹೇಳಿರುವ ಆದೇಶ ವಾಪಸ್ ಪಡೆಯಬೇಕು.
- ಮೊಬೈಲ್ ಕೆಲಸಗಳನ್ನು ಒತ್ತಾಯ ಪೂರ್ವಕವಾಗಿ ಮಾಡಿಸಿಕೊಳ್ಳುತ್ತಿರುವುದನ್ನು ಕೈಬಿಡಿ. ಅಥವಾ ಮೊಬೈಲ್ ಡಾಟಾ ಒದಗಿಸಿ, ಮೊಬೈಲ್ ಕೆಲಸಗಳಿಗೆ ಪ್ರೋತ್ಸಾಹಧನ ನಿಗದಿ ಮಾಡಿ, ಯಾರಿಗೆ ಮೊಬೈಲ್ ಕೆಲಸ ಮಾಡಲು ಆಗುವುದಿಲ್ಲವೊ ಅವರಿಗೆ ಪರ್ಯಾಯ ವ್ಯವಸ್ಥೆ ಮಾಡಿ.
- ವರ್ಷಕ್ಕೆ ಸೇವಾ ನಿವೃತ್ತಿ ಪಡೆಯುವ ಕಾರ್ಯಕರ್ತೆಯರಿಗೆ ಪಶ್ಚಿಮ ಬಂಗಾಳ ರಾಜ್ಯದಲ್ಲಿ ಇರುವಂತೆ 5 ಲಕ್ಷ ರೂ.ಗೆ ಹೆಚ್ಚಿಸುವುದು.
- ತೀವ್ರವಾದ ಅನಾರೋಗ್ಯ, ಚಿಕಿತ್ಸೆ ಪಡೆಯುವ ಅವಧಿಯಲ್ಲಿ ಕನಿಷ್ಠ 3 ತಿಂಗಳುಗಳ ಕಾಲ ರಾಜ್ಯ ಸರ್ಕಾರದ ನಿಶ್ಚಿತ ಗೌರವಧನ ಮತ್ತು ರುಟೀನ್ ಚಟುವಟಿಕೆಗಳ ನಿಗದಿತ ಪ್ರೋತ್ಸಾಹಧನ ನೀಡಬೇಕು.
- ಆಶಾ ಸೇವೆಯಲ್ಲಿ ಇದ್ದಾಗ ಆಗುವ ಆನಾಹುತಗಳಿಗೆ ಸಂಪೂರ್ಣ ಜವಾಬ್ದಾರಿಯನ್ನು ಇಲಾಖೆ ವಹಿಸಿಕೊಳ್ಳಬೇಕು.
- ಎಲ್ಲ ಆಶಾ ಕಾರ್ಯಕರ್ತೆಯರ ಸಂಪೂರ್ಣ ಆರೋಗ್ಯ ತಪಾಸಣೆ ಮಾಡಬೇಕು. ತ್ರೀವ್ರ ಕಾಯಿ ಇದ್ದಲ್ಲಿ ಕೂಡಲೇ ಉಚಿತ ಚಿಕಿತ್ಸೆ ಮಾಡಬೇಕು.
- ಆಶಾ ಕಾರ್ಯಕರ್ತೆಯರನ್ನು ಸರ್ಕಾರಿ ನೌಕರರೆಂದು ಪರಿಗಣಿಸಿ, ಕನಿಷ್ಠ ವೇತನ, ಗ್ರಾಜ್ಯುಟಿ, ಪಿಎಫ್-ಇಎಸ್ ಐ ಸೌಲಭ್ಯ ಒದಗಿಸಬೇಕು.