ಬೆಂಗಳೂರು : ಸರ್ಕಾರಿ ನೌಕರರ ಆಸ್ತಿ ವಿವರ ಬಹಿರಂಗಕ್ಕೆ ಲೋಕಾಯುಕ್ತದಿಂದ ಸಿಎಸ್‍ಗೆ ಪತ್ರ ಬರೆದ ವಿಚಾರಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಮತ್ತು ಸರ್ಕಾರಿ ನೌಕರರ ಮಧ್ಯೆ ಸಂಘರ್ಷ ಶುರುವಾಗಿದೆ. ಲೋಕಾಯುಕ್ತ ನಿರ್ಧಾರಕ್ಕೆ ಸಚಿವಾಲಯದ ನೌಕರರ ಸಂಘದಿಂದ ತೀವ್ರ ವಿರೋಧ ವ್ಯಕ್ತವಾಗಿದೆ.
ಸರ್ಕಾರಿ ನೌಕರರ ಮೇಲೆ ಭ್ರಷ್ಟಾಚಾರ ಆರೋಪ ಬಂದಾಗ ಅಥವಾ ಲೋಕಾಯುಕ್ತ ತನಿಖೆ ವೇಳೆ ಆಸ್ತಿ ವಿವರಗಳನ್ನು ಇಲಾಖೆಯ ಮುಖ್ಯಸ್ಥರು ನೀಡುತ್ತಿಲ್ಲ. ಹೀಗಾಗಿ ಲೋಕಾಯುಕ್ತ ಸಿಎಸ್‍ಗೆ ಪತ್ರ ಬರೆದಿದೆ. ಪತ್ರದಲ್ಲಿ ಸಾರ್ವಜನಿಕರಿಗೆ ಲಭ್ಯವಾಗುವಂತೆ ಆನ್‍ಲೈನ್ ಪೋರ್ಟಲ್‍ನಲ್ಲಿ ಆಸ್ತಿ ವಿವರ ಅಪ್ಲೋಡ್ ಮಾಡಬೇಕು ಎಂದು ಸೂಚಿಸಿದೆ.
ಲೋಕಾಯುಕ್ತದ ನಿರ್ಧಾರಕ್ಕೆ ಬಿಲ್‍ಕುಲ್ ಒಪ್ಪದ ಸರ್ಕಾರಿ ನೌಕರರು, ಲೋಕಾಯುಕ್ತ ನಡೆಯ ವಿರುದ್ಧ ತಿರುಗಿಬಿದ್ದಿದ್ದಾರೆ. ತಮ್ಮ ಆಸ್ತಿ ವಿವರಗಳನ್ನು ಆನ್‍ಲೈನ್ ಪೋರ್ಟಲ್‍ನಲ್ಲಿ ಅಪ್‍ಲೋಡ್ ಮಾಡಲು ನಿರಾಕರಿಸಿದ್ದಾರೆ. ಈ ಸಂಬಂಧ ಸಚಿವಾಲಯದ ನೌಕರರ ಸಂಘ ಸಿಎಸ್‍ಗೆ ಪತ್ರ ಬರೆದಿದೆ. ಹೀಗೆ ಮಾಡಿದರೆ ಸರ್ಕಾರಿ ನೌಕರರಿಗೆ ತೊಂದರೆಯಾಗಲಿದೆ. ಕೆಲವು ಆಸ್ತಿ ವಿವರ ಮುಂದಿಟ್ಟುಕೊಡು ಬ್ಲಾಕ್‍ಮೇಲ್ ಮಾಡುವ ಸಾಧ್ಯತೆ ಇದೆ ಎಂದು ಆರೋಪಿಸಿದ್ದಾರೆ.
ಕೇವಲ 1% ಭ್ರಷ್ಟ ಅಧಿಕಾರಿಗಳು ಇರಬಹುದು. ಇಂಥಹ ಸಂದರ್ಭದಲ್ಲಿ ಎಲ್ಲರಿಗೂ ಶಿಕ್ಷೆ ಕೊಡುವುದು ಸರಿಯಲ್ಲ. ಒಂದು ವೇಳೆ ಲೋಕಾಯುಕ್ತ ಒತ್ತಾಯಕ್ಕೆ ಮಣಿದರೇ ಪ್ರತಿಭಟನೆ ಮಾಡ್ತೀವಿ. ಸಚಿವಾಲಯ ಬಂದ್ ಮಾಡ್ತೀವಿ ಎಂದು ನೌಕರರ ಸಂಘ ಎಚ್ಚರಿಕೆ ನೀಡಿದೆ.