ಕೊಪ್ಪಳ : ಹೆಚ್ಚುವರಿ ಪರಿಹಾರ ನೀಡದ್ದಕ್ಕೆ ಕೋರ್ಟ್ ಆದೇಶದ ಮೇರೆಗೆ ಸಣ್ಣ ನೀರಾವರಿ ಇಲಾಖೆಯ ಪೀಠೋಪಕರಣ ಜಪ್ತಿ ಮಾಡಿರುವ ಘಟನೆ ಕೊಪ್ಪಳ ನಗರದ ಕಿನ್ನಾಳ ರಸ್ತೆಯಲ್ಲಿನ ಇಲಾಖೆಯಲ್ಲಿ ನಡೆದಿದೆ.
ರೈತರಿಗೆ ಹೆಚ್ಚುವರಿ ಪರಿಹಾರ ನೀಡುವಂತೆ ಜಿಲ್ಲಾ ನ್ಯಾಯಾಲಯ ನೀಡಿದ್ದ ತೀರ್ಪು ಪಾಲನೆ ಮಾಡದ ಹಿನ್ನೆಲೆ ಸಣ್ಣ ನೀರಾವರಿ ಇಲಾಖೆಯ ಪೀಠೋಪಕರಣ ಜಪ್ತಿಗೆ ಕೋರ್ಟ್ ಆದೇಶಿಸಿದೆ. ಕೋರ್ಟ್ ಆದೇಶದ ಹಿನ್ನೆಲೆ ರೈತರ ಪರ ವಕೀಲರು, ನ್ಯಾಯಾಲಯದ ಸಿಬ್ಬಂದಿ ಮತ್ತು ನೊಂದ ರೈತರ ಹಾಜರಾತಿಯಲ್ಲಿ ವಿವಿಧ ವಸ್ತುಗಳನ್ನು ಜಪ್ತಿ ಮಾಡಲಾಯಿತು.
ನ್ಯಾಯಾಲಯದ ಸಿಬ್ಬಂದಿ 27 ಕಬ್ಬಿಣದ ಅಲ್ಮಾರ್, 13 ಕಟ್ಟಿಗೆ ಟೇಬಲ್, 3 ಕಬ್ಬಿಣದ ಟೇಬಲ್, 1 ಕಂಪ್ಯೂಟರ್ ಟೇಬಲ್, 2 ಕಬ್ಬಿಣದ ರ್ಯಾಕ್, 2 ಕಟ್ಟಿಗೆ ಚೇರ್, 11 ವೀಲ್ ಚೇರ್, 10 ಪ್ಲಾಸ್ಟಿಕ್ ಚೇರ್, 2 ಕಂಪ್ಯೂಟರ್ ಸೆಟ್ ಮತ್ತು 1 ಕಂಪ್ಯೂಟರ್ ಮಾನಿಟರ್ ಸೇರಿ ಸುಮಾರು 1.43 ಲಕ್ಷ ರೂ. ಅಂದಾಜು ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.
ಏನಿದು ಪ್ರಕರಣ? – ಕುಕನೂರು ತಾಲೂಕು ಡಿ.ಬಾಲಾಪೂರ ಗ್ರಾಮದಲ್ಲಿ ಸಣ್ಣ ನೀರಾವರಿ ಇಲಾಖೆಯು ಜಿನುಗು ಕೆರೆ ನಿರ್ಮಾಣ ಮಾಡಿದೆ. 14 ರೈತರಿಂದ ಸರ್ಕಾರ ಕೆರೆ ನಿರ್ಮಾಣಕ್ಕೆ ಅಗತ್ಯವಾದ 26 ಎಕರೆ ಭೂಮಿಯನ್ನು ವಶಪಡಿಸಿಕೊಂಡಿತ್ತು. ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಕಳೆದ 2007ರಲ್ಲೇ ಭೂಮಿ ವಶಕ್ಕೆ ಪಡೆದು, 2012ರಲ್ಲಿ ಪ್ರತಿ ಎಕರೆಗೆ 41 ಸಾವಿರ ರೂ. ಪರಿಹಾರ ನೀಡಿದ್ದರು ಎಂದು ಹೇಳಲಾಗಿದೆ.