ಹುಬ್ಬಳ್ಳಿ : ಕಾಂಗ್ರೆಸ್ ಪಕ್ಷ ಡಾ. ಬಿಆರ್​ ಅಂಬೇಡ್ಕರ್ ಅವರನ್ನು ಅತ್ಯಂತ ಕೆಟ್ಟದಾಗಿ ನಡೆಸಿಕೊಂಡಿದೆ. ಜವಾಹರ್​ ಲಾಲ್​ ನೆಹರುರಿಂದ ರಾಜೀವ್ ಗಾಂಧಿವರೆಗೂ ಬಿಆರ್​ ಅಂಬೇಡ್ಕರ್​ ಅವರನ್ನು ಬಹಳ ಕೆಟ್ಟದಾಗಿ ನಡೆಸಿಕೊಂಡಿದ್ದಾರೆ. ಕೇಂದ್ರಲ್ಲಿ ಕಾಂಗ್ರೆಸ್​ ಅಧಿಕಾರದಲ್ಲಿದ್ದಾಗ ಬಿಆರ್​ ಅಂಬೇಡ್ಕರ್ ಅವರಿಗೆ ಭಾರತ ರತ್ನ ಕೊಡಲಿಲ್ಲ. ಬಿಆರ್​ ಅಂಬೇಡ್ಕರ್ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ನೆಹರು, “ರಾಜೀನಾಮೆಯಿಂದ ಏನೂ ನಷ್ಟವಿಲ್ಲ” ಎಂದಿದ್ದರು ಎಂದು ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿ ತಿಳಿಸಿದರು.

ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಪ್ರಹ್ಲಾದ್​ ಜೋಶಿ, ಕಾಂಗ್ರೆಸ್​ ನಾಯಕರು ಬಿಆರ್​ ಅಂಬೇಡ್ಕರ್​ ಅವರನ್ನು ಎರಡು ಬಾರಿ ಲೋಕಸಭೆ ಚುನಾವಣೆಯಲ್ಲಿ ಸೋಲಿಸಿದರು. ಕಾಂಗ್ರೆಸ್ ಸುಡುವ ಪಕ್ಷ, ಅದರಲ್ಲಿ ದಲಿತರು ಹೋಗಬಾರದು ಅಂತ ಅಂಬೇಡ್ಕರ್ ಹೇಳಿದ್ದರು. ಕೆಲವು ದಲಿತ ಮುಖಂಡರಿಗೆ ಕಾಂಗ್ರೆಸ್ ಭ್ರಮೆ ಹುಟ್ಟಿಸಿದೆ. ದಲಿತರು ಕಾಂಗ್ರೆಸ್​ನಿಂದ ದೂರ ಇದ್ದಷ್ಟು ಒಳ್ಳೆಯದು. ಕಾಂಗ್ರೆಸ್​ನವರು ಮೀಸಲಾತಿ ವಿರೋಧ ಮಾಡಿದ್ದರು. ಕಾಂಗ್ರೆಸ್ ಸದಾ ದಲಿತ ಸಮುದಾಯವನ್ನು ಕತ್ತಲಲ್ಲಿ ಇಟ್ಟಿದೆ. ದಲಿತರು ಜಾಗೃತರಾಗಿರಬೇಕು ಎಂದು ಹೇಳಿದರು.

ಕರ್ನಾಟಕ ಸರ್ಕಾರದಲ್ಲಿ ಅನೇಕ ಭ್ರಷ್ಟಾಚಾರ, ಹಗರಣಗಳು ನಡೆಯುತ್ತಿವೆ. ಸರ್ಕಾರ ಆಡಳಿತ ಯಂತ್ರದ ನಿಯಂತ್ರಣ ಕಳೆದುಕೊಂಡಿದೆ. ಸಾರಿಗೆ ಇಲಾಖೆಯ ಅಂಗ ಸಂಸ್ಥೆಗಳು ಬಾಗಿಲು ಮುಚ್ಚುವ ಹಂತಕ್ಕೆ ತಲುಪಿವೆ. ಕಾಂಗ್ರೆಸ್​ನ ಒಳ ಜಗಳದಿಂದ ರಾಜ್ಯದಲ್ಲಿ ಹತ್ಯೆ, ಆತ್ಮಹತ್ಯೆಗಳಾಗುತ್ತಿವೆ. ಕಲಬುರಗಿಯಲ್ಲಿ ಗುತ್ತಿಗೆದಾರನ ಆತ್ಮಹತ್ಯೆಯಾಗಿದೆ. ಇದಾದ ಮೇಲೂ ಪ್ರಿಯಾಂಕ್ ಖರ್ಗೆ ಅಹಂಕಾರದಿಂದ ಮಾತಾಡಿದರು. ಬಸ್ ದರ ಏರಿಸಿ, ಜನರ ಮೇಲೆ ಹೊರೆ ಹೊರಸಿದ್ದಾರೆ. ಕಾಂಗ್ರೆಸ್ ದೇಶದಲ್ಲಿ ಅಯೋಮಯಕ್ಕೆ ತಲುಪಿದೆ. ದೆಹಲಿ ಚುನಾವಣೆಯಲ್ಲಿ ಕಾಂಗ್ರೆಸ್ ಶೂನ್ಯಕ್ಕೆ ಬರಲಿದೆ. ಕಾಂಗ್ರೆಸ್ ಪ್ರಾದೇಶಿಕ ಪಕ್ಷವಾಗುವ ಹಂತಕ್ಕೆ ಬಂದಿದೆ ಎಂದರು.

ಡಿಸಿಎಂ ಡಿಕೆ ಶಿವಕುಮಾರ್ ಶತ್ರುಗಳ ಸಂಹಾರ ಎಂದಿದ್ದಾರೆ. ಅವರ ಪ್ರಕಾರ ಯಾರು ಶತ್ರುಗಳು?ರಾಜಕಾರಣದಲ್ಲಿ ಯಾರೂ ಶತ್ರುಗಳು ಅಲ್ಲ, ಪ್ರತಿಸ್ಪರ್ಧಿಗಳು. ಶತ್ರುಗಳು ಯಾರು ಅಂತ ಡಿಕೆ ಶಿವಕುಮಾರ್ ಹೇಳಬೇಕು. ಸಿದ್ದರಾಮಯ್ಯರವರಾ ಅಥವಾ ಜಿ ಪರಮೇಶ್ವರರವರಾ ಎಂದು ಸ್ಪಷ್ಟಪಡಿಸಬೇಕು ಎಂದು ವಾಗ್ದಾಳಿ ಮಾಡಿದರು.

ಸಿಟಿ ರವಿಗೆ ಬೆದರಿಕೆ ಪತ್ರ ಬಂದಿರುವುದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಕಾನೂನು ಕೈಗೆ ತೆಗೆದುಕೊಳ್ಳುವ ಅಧಿಕಾರ ಯಾರಿಗೂ ಇಲ್ಲ. ಸಿಟಿ ರವಿಯವರ ಮೇಲೆ ಹಲ್ಲೆ ಮಾಡಿದವರ ಮೇಲೆ ಕ್ರಮವಾಗಿಲ್ಲ. ನಮ್ಮದು ಸುಸಂಸ್ಕೃತ ರಾಜ್ಯ, ಮನಸ್ಸು ಮಾಡಿದರೇ ಬೆದರಿಕೆ ಪತ್ರ ಕಳುಹಿಸಿದವರನ್ನು ಒಂದು ಗಂಟೆಯಲ್ಲಿ ಹಿಡಿಯಬಹುದು ಎಂದರು.

ನಕ್ಸಲ್ ಶರಣಾಗತಿಗೆ ನಮ್ಮ ವಿರೋಧವಿಲ್ಲ. ನಕ್ಸಲ್ ಚಟುವಟಿಕೆಗೆ ವಿದೇಶದಿಂದ ದೇಶದ್ರೋಹಿ ಚಟುವಟಿಕೆಯಲ್ಲಿ ಭಾಗಿಯಾದವರ ಬೆಂಬಲವಿದೆ. ಪ್ಯಾಕೇಜ್​ಗೆ​​​ ನಮ್ಮ ವಿರೋಧವಿಲ್ಲ. ನಕ್ಸಲ್​ರು ಶಸ್ತ್ರಾಸ್ತ್ರ ಒಪ್ಪಿಸಿಲ್ಲ ಎಂಬುವುದು ಮುಖ್ಯವಾಗಿ. ಶಸ್ತ್ರಾಸ್ತ್ರ ಒಪ್ಪಿಸಿಲ್ಲ ಅಂದರೇ ಬೇರೆಯವರಿಗೆ ಕೊಟ್ರಾ? ಎಂದು ಪ್ರಶ್ನಿಸಿದರು.

Leave a Reply

Your email address will not be published. Required fields are marked *