ವಾಷಿಂಗ್ಟನ್ : ಅಮೆರಿಕದ ಲಾಸ್ ಏಂಜಲೀಸ್ನಲ್ಲಿ ಹೊತ್ತಿಕೊಂಡ ಕಾಡ್ಗಿಚ್ಚು ತನ್ನ ಅಗ್ನಿ ನರ್ತನ ಮುಂದುವರಿಸಿದೆ. ಸಾವಿನ ಸಂಖ್ಯೆ 24ಕ್ಕೆ ಏರಿಕೆಯಾಗಿದೆ. ಸಾವಿರಾರು ಎಕರೆ ಭೂಪ್ರದೇಶ ಬೆಂಕಿಜ್ವಾಲೆಗೆ ಭಸ್ಮವಾಗಿದ್ದು, ಆರ್ಥಿಕ ನಷ್ಟವುಂಟುಮಾಡಿದೆ.
ಈ ನಡುವೆ ಬೆಂಕಿ ನಂದಿಸುವಲ್ಲಿ ವಿಫಲವಾಗಿರುವ ಕ್ಯಾಲಿಫೋರ್ನಿಯಾ ಅಧಿಕಾರಿಗಳ ವಿರುದ್ಧ ಅಮೆರಿಕದ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತೀವ್ರ ಅಸಮಾಧಾನ ಹೊರಹಾಕಿದ್ದಾರೆ.
ಲಾಸ್ ಏಂಜಲೀಸ್ನಲ್ಲಿ ಹರಡುತ್ತಿರುವ ಕಾಡ್ಗಿಚ್ಚು ಅಧಿಕಾರಿಗಳ ಅಸಮರ್ಥತೆ ತೋರಿಸುತ್ತದೆ. ಇದು ದೇಶದ ಇತಿಹಾಸದಲ್ಲೇ ಅತ್ಯಂತ ಭೀಕರ ದುರಂತಗಳಲ್ಲಿ ಒಂದಾಗಿದೆ. ಈ ಬೆನ್ನಲ್ಲೇ ನಿರ್ಗಮಿತ ಅಧ್ಯಕ್ಷ ಜೋ ಬೈಡನ್ ಪಕ್ಷದ ಸದಸ್ಯರೊಬ್ಬರು, ಲಾಸ್ ಏಂಜಲೀಸ್ ನಗರವನ್ನು 2.0 ಪ್ಲ್ಯಾನ್ ಅಡಿ ಮರು ನಿರ್ಮಾಣ ಮಾಡಲಾಗುವುದು ಎಂದು ಪ್ರತಿಜ್ಞೆ ಮಾಡಿದ್ದಾರೆ.
ಕಾಡ್ಗಿಚ್ಚಿಗೆ ಕಾರಣವೇನು ಎಂಬುದನ್ನು ತಿಳಿಯಲು ಎಫ್ಬಿಐ ಮತ್ತು ಸ್ಥಳೀಯ ಅಧಿಕಾರಿಗಳ ತಂಡಗಳು ಸೇರಿ ಉನ್ನತ ಮಟ್ಟದ ತನಿಖೆಗೆ ಮುಂದಾಗಿವೆ ಎಂದು ವರದಿಯಾಗಿದೆ.