ಜೋಧ್‌ಪುರ : 2013ರ ಅತ್ಯಾಚಾರ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಸ್ವಯಂಘೋಷಿತ ದೇವಮಾನವ ಅಸಾರಾಂ ಬಾಪುಗೆ ರಾಜಸ್ಥಾನ ಹೈಕೋರ್ಟ್ ಮಂಗಳವಾರ ಮಾರ್ಚ್ 31ರವರೆಗೆ ಮಧ್ಯಂತರ ಜಾಮೀನು ಮಂಜೂರು ಮಾಡಿದೆ.
ವಿವಿಧ ಕಾಯಿಲೆಗಳಿಂದ ಬಳಲುತ್ತಿದ್ದ ಮತ್ತು ಚಿಕಿತ್ಸೆಯ ಅಗತ್ಯವನ್ನು ಗಮನಿಸಿದ ಸುಪ್ರೀಂ ಕೋರ್ಟ್ ಮತ್ತೊಂದು ಅತ್ಯಾಚಾರ ಪ್ರಕರಣದಲ್ಲಿ ಮಾರ್ಚ್ 31ರವರೆಗೆ ಅಸಾರಾಂ ಅವರಿಗೆ ಜನವರಿ 7ರಂದು ಮಧ್ಯಂತರ ಜಾಮೀನು ನೀಡಿತ್ತು. ಅದಾದ ವಾರದ ನಂತರ ಮತ್ತೊಮ್ಮೆ ಮಧ್ಯಂತರ ಜಾಮೀನು ಸಿಕ್ಕಿದೆ.
ವೈದ್ಯಕೀಯ ಕಾರಣಗಳಿಗಾಗಿ ಸರ್ವೋಚ್ಚ ನ್ಯಾಯಾಲಯವು ಅವರಿಗೆ ಜಾಮೀನು ನೀಡಿದ ಕೂಡಲೇ, ಅಸಾರಾಂ ಪರ ವಕೀಲರು ಹೈಕೋರ್ಟ್‌ನಲ್ಲಿ ಜೀವಾವಧಿ ಶಿಕ್ಷೆಯನ್ನು ಅಮಾನತುಗೊಳಿಸುವಂತೆ ಮನವಿ ಮಾಡಿದರು.
ಅರ್ಜಿಯ ಸ್ವರೂಪವು ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಿದಂತೆಯೇ ಇದೆ ಎಂದು ಪರಿಗಣಿಸಿದ ನ್ಯಾಯಮೂರ್ತಿಗಳಾದ ದಿನೇಶ್ ಮೆಹ್ತಾ ಮತ್ತು ವಿನೀತ್ ಕುಮಾರ್ ಮಾಥುರ್ ಅವರಿದ್ದ ವಿಭಾಗೀಯ ಪೀಠವು, ಆಸಾರಾಂಗೆ ಮಧ್ಯಂತರ ಜಾಮೀನು ಮಂಜೂರು ಮಾಡಿದೆ.
‘ಈ ಅರ್ಜಿಯು ಸುಪ್ರೀಂಕೋರ್ಟ್‌ನಲ್ಲಿ ಸಲ್ಲಿಸಿದ ಮನವಿಯ ಸ್ವರೂಪವನ್ನು ಹೋಲುತ್ತದೆ ಮತ್ತು ಈ ಪ್ರಕರಣದಲ್ಲಿಯೂ ಜಾಮೀನು ಮಂಜೂರಿಗೆ ಅದುವೇ ಮಾನ್ಯವಾಗಿದೆ ಎಂದು ನಾವು ವಾದಿಸಿದ್ದೇವೆ. ಅಸಾರಾಂ ಅವರ ಮಧ್ಯಂತರ ಜಾಮೀನಿಗೆ ಸುಪ್ರೀಂ ಕೋರ್ಟ್ ಜನವರಿ 7ರಂದು ನಿಗದಿಪಡಿಸಿದ ಷರತ್ತುಗಳಂತೆಯೇ ಈ ಜಾಮೀನು ಇದೆ’ ಎಂದು ಅಸಾರಾಂ ಪರ ವಕೀಲ ನಿಶಾಂತ್ ಬೋರಾ ಹೇಳಿದ್ದಾರೆ.