ಬೆಂಗಳೂರು : ಪಕ್ಷದಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ ಎಂಬ ಸಂದೇಶ ರವಾನಿಸಲು ಸಿಎಂ ಸಿದ್ದರಾಮಯ್ಯ ಅವರು ನೆನ್ನೆ ನಡೆಸಿದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಬಣದಾಟ ಬಹಿರಂಗವಾಗಿದೆ.
ಸಭೆಯನ್ನುದ್ದೇಶಿಸಿ ಮಾತಾಡಿದ ಡಿಕೆ.ಶಿವಕುಮಾರ್ ಅವರು, ನೂತನ 100 ಕಚೇರಿಗಳ ಸ್ಥಾಪನೆ ವಿಚಾರವಾಗಿ ಮಾತನಾಡುತ್ತಾ ಬೆಳಗಾವಿ ಜಿಲ್ಲಾ ಕಾಂಗ್ರೆಸ್ ಕಚೇರಿಯನ್ನು ಲಕ್ಷ್ಮೀ ಹೆಬ್ಬಾಳ್ಕರ್ ನಿರ್ಮಿಸಿದ್ದಾರೆಂದು ಹೇಳಿದರು. ಇದಕ್ಕೆ ಸತೀಶ್ ಜಾರಕಿಹೊಳಿ ಆಕ್ಷೇಪ ಎತ್ತಿದರು ಎಂದು ಹೇಳಿದರು.
ಪದೇ ಪದೇ ಕಾಂಗ್ರೆಸ್ ಕಚೇರಿಯನ್ನು ಹೆಬ್ಬಾಳ್ಕರ್ ಕಟ್ಟಿದರು ಎಂದು ಹೇಳಬೇಡಿ. ಈ ವಿಚಾರ ಒಂದ್ಸಲ ಕೇಳಿಸ್ಕೊಂಬಿಡಿ. ಜಿಲ್ಲಾ ಕಾಂಗ್ರೆಸ್ ಕಚೇರಿ ಕಟ್ಟಲು ಜಾಗ ಕೊಟ್ಟಿದ್ದು, ಇವತ್ತಿನ ಬಿಜೆಪಿ ಶಾಸಕ ನಮ್ಮ ಸೋದರ ರಮೇಶ್ ಜಾರಕಿಹೊಳಿ. ಕಟ್ಟಡ ಕಟ್ಟಲು ಮೂರು ಕೋಟಿ ಹಣ ಸುರಿದಿದ್ದು ನಾನು. ಇಲ್ಲಿ ಪದೇ ಪದೇ ಹೆಬ್ಬಾಳ್ಕರ್ ಕಟ್ಟಿದ್ರು, ಹೆಬ್ಬಾಳ್ಕರ್ ಕಟ್ಟಿದ್ರು ಅಂತ ಹೇಳಿ ಅವಮಾನಿಸಬೇಡಿ ಎಂದು ಅಸಮಾಧಾನ ವ್ಯಕ್ತಪಡಿಸಿದರು ಎಂದು ತಿಳಿದಬಂದಿದೆ.
ಈ ವೇಳೆ ಮಾತನಾಡಿದ ಹೆಬ್ಬಾಳ್ಕರ್ ಅವರು, ಜವಾಬ್ದಾರಿ ತೆಗೆದುಕೊಳ್ಳುವಾಗ ಅಲ್ಲಿ ಸರಿಯಾಗಿ ವಿದ್ಯುತ್ ಕೂಡ ಇರಲಿಲ್ಲ. ಕನಿಷ್ಠ ಮೂಲಸೌಕರ್ಯವೂ ಇರಲಿಲ್ಲ. ನಾನು ಮೊದಲ ಬಾರಿ ಸಚಿವೆಯಾಗಿ, ಜಿಲ್ಲೆಯಲ್ಲಿ ಕಡಿಮೆ ಅವಧಿಯಲ್ಲಿ ಪಕ್ಷದ ಕಚೇರಿ ನಿರ್ಮಾಣ ಮಾಡಲಾಗಿದೆ ಎಂದು ಸಮರ್ಥಿಸಿಕೊಳ್ಳಲು ಮುಂದಾದರು.
ಲಕ್ಷ್ಮೀ ಹೆಬ್ಬಾಳ್ಕರ್ ಮಾತಿಗೆ ಜಾರಕಿಹೊಳಿ ಅವರು ಅಸಮಾಧಾನಗೊಂಡರು. ಜಾಗ ಕೊಟ್ಟಿದ್ದು ನಾನು, ನಂತರ ಪಕ್ಷದ ಕಚೇರಿ ನಿರ್ಮಾಣ ಆಗಿದೆ ಎಂದು ಕೊಟ್ಟರು. ಇದೇ ವೇಳೆ ಪಕ್ಷಕ್ಕಾಗಿ ತಾವು ನೀಡಿರುವ ಕೊಡುಗೆಯನ್ನು ವಿವರಿಸಿದರು.
ಜಿಲ್ಲಾ ಕಾಂಗ್ರೆಸ್ ಸಮಿತಿ (ಡಿಸಿಸಿ) ಅಧ್ಯಕ್ಷೆಯಾಗಿ ಅಂದಿನ ಸಚಿವ ವಿನಯಕುಮಾರ್ ಸೊರಕೆ ಅವರ ನೆರವಿನಿಂದ ಸೂಕ್ತ ಬೆಲೆಗೆ ನಿವೇಶನ ದೊರಕಿಸಿ, ಹಣ ಕ್ರೋಡೀಕರಿಸಿ ಕಾಂಗ್ರೆಸ್ ಕಚೇರಿ ನಿರ್ಮಿಸಿದ್ದೇನೆ ಎಂದು ಲಕ್ಷ್ಮೀ ಅವರು ಹೇಳಿದರು.
ಬಳಿಕ ಸತೀಶ್ ಜಾರಕಿಹೊಳಿ, ಎಂಎಲ್‌ಸಿ ಎಂಆರ್ ಸೀತಾರಾಂ ಸೇರಿದಂತೆ ಹಿರಿಯ ನಾಯಕರ ಸಲಹೆಯ ಹೊರತಾಗಿಯೂ ಲಕ್ಷ್ಮಿ ಅವರು ವೇದಿಕೆಗೆ ತೆರಳಿ ಡಿಸಿಸಿ ಭವನ ನಿರ್ಮಾಣಕ್ಕೆ ತಾವು ನೀಡಿ ಕೊಡುಗೆಯನ್ನು ವವರಿಸಿದರು. ಡಿಕೆ.ಶಿವಕುಮಾರ್ ಅವರ ಸಲಹೆಗೂ ಕಿವಿಗೊಡಲಿಲ್ಲ ಎಂದು ಮೂಲಗಳು ತಿಳಿಸಿವೆ.
“ನಮ್ಮ ಪ್ರಯತ್ನಕ್ಕೆ ಮನ್ನಣೆ ಸಿಗಬೇಕಲ್ಲವೇ?” ಎಂದು ಪ್ರಶ್ನಿಸಿದರು. ಬಳಿಕ ಸಿಎಂ, ಡಿಸಿಎಂ ಮತ್ತು ಸುರ್ಜೇವಾಲಾ ಅವರು ಮಧ್ಯಪ್ರವೇಶಿಸಿ, ಪರಿಸ್ಥಿತಿ ಶಾಂತಗೊಳಿಸಿದರು. ನಂತರ ಮಾತನಾಡಿದ ಸಿದ್ದರಾಮಯ್ಯ ಅವರು, ಡಿಕೆ.ಶಿವಕುಮಾರ್ ಸೇರಿದಂತೆ ಎಲ್ಲರೂ ಹೈಕಮಾಂಡ್ ನಿರ್ಧಾರಗಳನ್ನು ಪಾಲಿಸಬೇಕು. ಪಕ್ಷದ ಹಿತಾಸಕ್ತಿಯೇ ಮುಖ್ಯ ಎಂದು ಎಲ್ಲಾ ಶಾಸಕರಿಗೆ ಸೂಚಿಸಿದರು.
ಇದೇ ವೇಳೆ ವಿರೋಧ ಪಕ್ಷದ ಶಾಸಕರು ಪ್ರತಿನಿಧಿಸುವ ಕ್ಷೇತ್ರಗಳು ಸೇರಿದಂತೆ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ತಲಾ 10 ಕೋಟಿ ರೂಪಾಯಿ ಹೆಚ್ಚುವರಿ ಹಣವನ್ನು ಮಂಜೂರು ಮಾಡಿರುವುದಾಗಿ ತಿಳಿಸಿದರು. ಬಜೆಟ್‌ಗೆ ಮುಂಚಿತವಾಗಿ ಪಕ್ಷದ ಶಾಸಕರ ಸಲಹೆಗಳನ್ನು ಕೇಳಲು ನಾನು ಮತ್ತೊಂದು ಸಿಎಲ್‌ಪಿಯನ್ನು ಕರೆಯುತ್ತೇನೆ ಎಂದು ಭರವಸೆ ನೀಡಿದರು.
ನಂತರ ಮಾತನಾಡಿದ ಸುರ್ಜೇವಾಲಾ ಅವರು, ಜನವರಿ 21 ರಂದು ಬೆಳಗಾವಿಯಲ್ಲಿ ನಡೆಯಲಿರುವ ‘ಜೈ ಬಾಪು, ಜೈ ಭೀಮ್, ಜೈ ಸಂವಿಧಾನ’ ಸಮಾವೇಶದ ಯಶಸ್ಸಿಗೆ ಕೊಡುಗೆ ನೀಡುವಂತೆ ಶಾಸಕರಿಗೆ ಸೂಚನೆ ನೀಡಿದರು. ಅಲ್ಲದೆ, ನಾಯಕತ್ವದ ವಿರುದ್ಧ ಅಥವಾ ಎಸ್‌ಸಿ/ಗಳ ಬಗ್ಗೆ ಯಾವುದೇ ಶಾಸಕರು ಮಾತನಾಡದಂತೆಯೂ ತಾಕೀತು ಮಾಡಿದರು.
ಶಾಸಕರು, ಸಚಿವರು, ನಾಯಕರು ಯಾರೂ ಪಕ್ಷದ ಶಿಸ್ತು ಮೀರಬಾರದು. ಪಕ್ಷ ತಾಯಿ ಇದ್ದಂತೆ. ಸರ್ಕಾರ ಮಗು ಇದ್ದಂತೆ. ಯಾವ ನಾಯಕರೂ ಪಕ್ಷವನ್ನು ನೆಲಸಮ ಮಾಡುವ ಕೆಲಸಕ್ಕೆ ಕೈ ಹಾಕಬಾರದು. ಪಕ್ಷವನ್ನು ನೆಲಸಮ ಮಾಡಲು ಮುಂದಾದರೆ ನಾವು ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ನಮ್ಮ ನಾಯಕರಲ್ಲಿ ಕೆಲವರಿಗೆ ಶಿಸ್ತು ಇಲ್ಲ. ಪಕ್ಷಕ್ಕಿಂತ ನಾವು ದೊಡ್ಡವರು ಎಂಬ ಭಾವನೆ ಕೆಲವರಲ್ಲಿ ಇದ್ದಂತಿದೆ. ಈಗಲೂ ನಾನು ಮನವಿ ಮಾಡುತ್ತೇನೆ. ಶಾಸಕರು, ನಾಯಕರು, ಸಚಿವರು ಯಾರೂ ಶಿಸ್ತು ಮೀರಬಾರದು. ಕಾರ್ಯಕರ್ತರನ್ನು ಗೌರವಯುತವಾಗಿ ಕಾಣಬೇಕೆಂದು ಮನವಿ ಮಾಡಿದರು.