ಬೆಂಗಳೂರು : ಡ್ರಗ್ಸ್ ಪ್ರಕರಣದಲ್ಲಿ ನಟಿ ರಾಗಿಣಿ ದ್ವಿವೇದಿಗೆ ಬಿಗ್ ರಿಲೀಫ್ ಸಿಕ್ಕಿದೆ. ನಟಿಯ ವಿರುದ್ಧ ಯಾವುದೇ ಸಾಕ್ಷ್ಯ ಸಿಗದ ಕಾರಣ ಕೇಸ್ ಖುಲಾಸೆ ಮಾಡಿ ಹೈಕೋರ್ಟ್ ಆದೇಶ ಪ್ರಕಟಿಸಿದೆ.
ಯಾವುದೇ ಸಾಕ್ಷ್ಯಾಧಾರ ಒದಗಿಸುವಲ್ಲಿ ಪ್ರಾಸಿಕ್ಯೂಷನ್ ವಿಫಲವಾಗಿದೆ ಎಂಬ ಕಾರಣ ನೀಡಿದ ಹೈಕೋರ್ಟ್ ಎ2 ರಾಗಿಣಿ ವಿರುದ್ಧದ ಪ್ರಕರಣವನ್ನು ರದ್ದು ಮಾಡಿದೆ.
ಈ ಪ್ರಕರಣಕ್ಕೆ ಸಂಬಧಿಸಿದಂತೆ ನಟಿ ರಾಗಿಣಿಯನ್ನು 2020ರ ಸೆಪ್ಟೆಂಬರ್‌ನಲ್ಲಿ ಬಂಧಿಸಲಾಗಿತ್ತು. ಹಲವು ದಿನ ಜೈಲುವಾಸವನ್ನೂ ಅನುಭವಿಸಿದ್ದರು. ಡ್ರಗ್ಸ್ ಮಾಫಿಯಾದೊಂದಿಗೆ ನಂಟು ಹೊಂದಿದ ಆರೋಪ ರಾಗಿಣಿ ಮೇಲೆ ಇತ್ತು. ಪಾರ್ಟಿ ಆಯೋಜಿಸಿ ಡ್ರಗ್ಸ್ ಬಳಕೆಗೂ ಅವರು ಅವಕಾಶ ಮಾಡಿಕೊಟ್ಟಿದ್ದರು ಎನ್ನಲಾಗಿತ್ತು.
ರಿಲೀಫ್ ಸಿಕ್ಕಿದ ಬೆನ್ನಲ್ಲೇ ನಟಿ ರಾಗಿಣಿ ಸಾಮಾಜಿಕ ಜಾಲತಾಣದಲ್ಲಿ ಸಂತಸ ವ್ಯಕ್ತಪಡಿಸಿದ್ದಾರೆ. ಹೊಸ ಅಧ್ಯಾಯ ಆರಂಭವಾಗಿದೆ. ಸತ್ಯಮೇವ ಜಯತೆ. ಮೌನ ಮುರಿಯುವ ಸಮಯ ಇದಾಗಿದೆ ಎಂದು ಪೋಸ್ಟ್ ಹಾಕಿಕೊಂಡಿದ್ದಾರೆ.
ರಾಗಿಣಿ ಜೊತೆ ಸೇರಿ ಮೋಜು ಕೂಟ ಆಯೋಜಿಸಿದ್ದ ಆರೋಪ ಎದುರಿಸುತ್ತಿದ್ದ ಎ4 ಪ್ರಶಾಂತ್ ರಂಕಾ ವಿರುದ್ಧದ ಪ್ರಕರಣವನ್ನು ಹೈಕೋರ್ಟ್ ರದ್ದು ಮಾಡಿದೆ ಎಂದು ತಿಳಿದು ಬಂದಿದೆ.