ನವದೆಹಲಿ : ಉಕ್ರೇನ್ ವಿರುದ್ಧದ ಯುದ್ಧಕ್ಕಾಗಿ ರಷ್ಯಾದ ಮಿಲಿಟರಿ ಬೆಂಬಲ ಸೇವೆಯಿಂದ ನೇಮಕಗೊಂಡಿದ್ದ, ಕೇರಳದ ವ್ಯಕ್ತಿಯೊಬ್ಬರ ಸಾವನ್ನು ವಿದೇಶಾಂಗ ಸಚಿವಾಲಯ ದು ದೃಢಪಡಿಸಿದೆ. ಇದರ ನಡುವೆ ರಷ್ಯಾ ಸೇನೆಯಲ್ಲಿ ಉಳಿದಿರುವ ಭಾರತೀಯ ಪ್ರಜೆಗಳನ್ನು ಆದಷ್ಟು ಬೇಗ ಸ್ವದೇಶಕ್ಕೆ ಕಳುಹಿಸಬೇಕೆಂಬ ತನ್ನ ಬೇಡಿಕೆಯನ್ನು ಪುನರುಚ್ಚರಿಸಿದೆ.
ಈ ವಿಷಯವನ್ನು ಇಂದು ಮಾಸ್ಕೋದಲ್ಲಿರುವ ರಷ್ಯಾದ ಅಧಿಕಾರಿಗಳೊಂದಿಗೆ ಹಾಗೂ ನವದೆಹಲಿಯಲ್ಲಿರುವ ರಷ್ಯಾದ ರಾಯಭಾರ ಕಚೇರಿಯೊಂದಿಗೆ ಚರ್ಚಿಸಲಾಗಿದೆ. ರಷ್ಯಾ ಸೇನೆಯಲ್ಲಿನ ಉಳಿದ ಭಾರತೀಯ ಪ್ರಜೆಗಳನ್ನು ಆದಷ್ಟು ಬೇಗ ಬಿಡುಗಡೆ ಮಾಡಬೇಕೆಂಬ ನಮ್ಮ ಬೇಡಿಕೆಯನ್ನು ನಾವು ಪುನರುಚ್ಚರಿಸಿದ್ದೇವೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಹೇಳಿದ್ದಾರೆ.
ರಷ್ಯಾದ ಸೇನೆಯಲ್ಲಿ ಕೆಲಸ ಮಾಡುತ್ತಿದ್ದ ಕೇರಳದ ಭಾರತೀಯ ಪ್ರಜೆಯೊಬ್ಬರು ಇತ್ತೀಚೆಗೆ ಸಾವನ್ನಪ್ಪಿದ್ದರು ಮತ್ತು ಇನ್ನೊಬ್ಬರು ಗಾಯಗೊಂಡಿದ್ದರು. ಮಾಸ್ಕೋದಲ್ಲಿರುವ ರಾಯಭಾರ ಕಚೇರಿಯು ಮೃತದೇಹಗಳನ್ನು ಸಾಗಿಸಲು ಮತ್ತು ಗಾಯಾಳುಗಳನ್ನು ಭಾರತಕ್ಕೆ ವಾಪಸ್ ಕಳುಹಿಸಲು ಪ್ರಯತ್ನಿಸುತ್ತಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.
ಇಂದು ಭಾರತವು ರಷ್ಯಾದ ಸೇನೆಯಲ್ಲಿ ಕೆಲಸ ಮಾಡುತ್ತಿರುವ ಭಾರತೀಯ ಪ್ರಜೆಗಳನ್ನು ಬೇಗನೆ ಬಿಡುಗಡೆ ಮಾಡಬೇಕೆಂಬ ತನ್ನ ಬೇಡಿಕೆಯನ್ನು ಪುನರುಚ್ಚರಿಸಿತು. ಭಾರತೀಯ ಪ್ರಜೆಯ ಸಾವಿಗೆ ಸಂತಾಪ ಸೂಚಿಸಿರುವ ವಿದೇಶಾಂಗ ಸಚಿವಾಲಯವು ಸೇನೆಯಲ್ಲಿರುವ ಇತರೆ ಭಾರತೀಯರನ್ನು ದೇಶಕ್ಕೆ ವಾಪಾಸ್ ಕಳುಹಿಸಬೇಕೆಂಬ ಬೇಡಿಕೆಯನ್ನು ಎತ್ತಿತು ಎಂದು ಹೇಳಲಾಗಿದೆ.