ದಕ್ಷಿಣ ಕೊರಿಯಾ : ದಕ್ಷಿಣ ಕೊರಿಯಾದ ಅಧ್ಯಕ್ಷ ಯೂನ್ ಸುಕ್ ಯೋಲ್​ನನ್ನು ಪೊಲೀಸರು ಬಂಧಿಸಿದ್ದಾರೆ. ದಕ್ಷಿಣ ಕೊರಿಯಾದ ನ್ಯಾಯಾಲಯ ಯೂನ್ ಸುಕ್ ಯೋಲ್ ವಿರುದ್ಧ ಬಂಧನ ವಾರಂಟ್​ಗೆ ಅನುಮೋದನೆ ನೀಡಿತ್ತು ಎಂದು ತನಿಖಾ ಅಧಿಕಾರಿಗಳು ತಿಳಿಸಿದ್ದರು.

ತನಿಖಾಧಿಕಾರಿಗಳು ದಂಗೆ ಮತ್ತು ಅಧಿಕಾರ ದುರುಪಯೋಗದ ಆರೋಪಗಳನ್ನು ಹೇರಿದ ನಂತರ ಸಿಯೋಲ್ ನ್ಯಾಯಾಲಯವು ಯೂನ್ ಸುಕ್ ಯೋಲ್‌ಗೆ ಬಂಧನ ವಾರಂಟ್ ಹೊರಡಿಸಿತ್ತು. ಉನ್ನತ ಶ್ರೇಣಿಯ ಅಧಿಕಾರಿಗಳ ಭ್ರಷ್ಟಾಚಾರ ತನಿಖಾ ಕಚೇರಿಯು ಸಿಯೋಲ್ ವೆಸ್ಟರ್ನ್ ಡಿಸ್ಟ್ರಿಕ್ಟ್ ಕೋರ್ಟ್ ವಾರಂಟ್ ಅನ್ನು ಅನುಮೋದಿಸಿದೆ ಎಂಬುದು ಕೆಲವು ದಿನಗಳ ಹಿಂದೆ ದೃಢಪಟ್ಟಿತ್ತು.

ದೋಷಾರೋಪಣೆಗೊಳಗಾದ ಅಧ್ಯಕ್ಷ ಯೂನ್ ಸುಕ್ ಯೋಲ್ ಅವರನ್ನು ದಕ್ಷಿಣ ಕೊರಿಯಾದಲ್ಲಿ ಬಂಧಿಸಲಾಗಿದೆ. ಇಂದು ಬೆಳಗ್ಗೆ, ದಕ್ಷಿಣ ಕೊರಿಯಾದ ಅಧಿಕಾರಿಗಳು ಯುನ್ ಸುಕ್ ಯೋಲ್ ಅನ್ನು ಬಂಧಿಸಲು ಅಧ್ಯಕ್ಷೀಯ ಭವನಕ್ಕೆ ತೆರಳಿದ್ದರು.

ಜನವರಿ 3ರಂದು ಅವರನ್ನು ಬಂಧಿಸಲು ಬಂದಿದ್ದ, ತಂಡ ಹಾಗೂ ಅಧ್ಯಕ್ಷರ ಭದ್ರತಾ ಪಡೆ (ಪಿಎಸ್‌ಎಸ್‌) ನಡುವೆ ಘರ್ಷಣೆ ನಡೆದಿದ್ದು, ಬಳಿಕ ತಂಡ ವಾಪಸ್ಸಾಗಬೇಕಾಯಿತು. ಈ ವೇಳೆ ಅಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸ್ ತಂಡಗಳೊಂದಿಗೆ ಅಧ್ಯಕ್ಷರನಿವಾಸ ಪ್ರವೇಶಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಸುಮಾರು 1000 ಪೊಲೀಸ್ ಅಧಿಕಾರಿಗಳ ತಂಡ ವಿವಿಧ ಮಾರ್ಗಗಳ ಮೂಲಕ ಅಧ್ಯಕ್ಷರ ನಿವಾಸಕ್ಕೆ ಪ್ರವೇಶಿಸಲು ಯತ್ನಿಸಿ ಯಶಸ್ವಿಯಾಗಿದೆ. ಅಧ್ಯಕ್ಷೀಯ ಭದ್ರತಾ ಸೇವೆಯ ಹಂಗಾಮಿ ಮುಖ್ಯಸ್ಥ ಕಿಮ್ ಸುಂಗ್-ಹೂನ್ ಅವರನ್ನು ಬಂಧಿಸಲಾಗಿದೆ ಎಂಬ ಸ್ಥಳೀಯ ಮಾಧ್ಯಮ ವರದಿಗಳನ್ನು ಪೊಲೀಸರು ನಿರಾಕರಿಸಿದ್ದಾರೆ. ಯೂನ್ ಅವರನ್ನು ಬಂಧಿಸುವ ಹಿಂದಿನ ಪ್ರಯತ್ನಕ್ಕೆ ಕಿಮ್ ಅಡ್ಡಿಪಡಿಸಿದ ಆರೋಪವಿದೆ.

ಮಾರ್ಷಲ್ ಕಾನೂನು ಬೆನ್ನಲ್ಲೇ ದಕ್ಷಿಣ ಕೊರಿಯಾ ರಾಜಕೀಯ ಬಿಕ್ಕಟ್ಟನ್ನು ಪಡೆದುಕೊಂಡಿತು. ಯೂನ್ ಅವರ ಬದಲಿಗೆ ಅಧಿಕಾರ ತೆಗೆದುಕೊಂಡಿದ್ದ ಹ್ಯಾನ್ ಡಕ್-ಸೂ ಅವರನ್ನು ಯೂನ್ ತನಿಖೆ ಮಾಡಲು ಶಾಸನವನ್ನು ಅನುಮೋದಿಸಲು ವಿಫಲವಾದ ಕಾರಣಕ್ಕಾಗಿ ಸಂಸತ್ತಿನಿಂದ ದೋಷಾರೋಪಣೆ ಮಾಡಲಾಯಿತು. ಪ್ರಸ್ತುತ ಹಣಕಾಸು ಸಚಿವ ಚೋಯ್ ಸಂಗ್-ಮೋಕ್ ಅವರು ಹಂಗಾಮಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ ಎಂದು ಹೇಳಲಾಗಿದೆ.

Leave a Reply

Your email address will not be published. Required fields are marked *