ಬೆಂಗಳೂರು : ರಾಜ್ಯಾಧ್ಯಕ್ಷ ಸ್ಥಾನಕ್ಕೆ ಚುನಾವಣಾ ಪ್ರಕ್ರಿಯೆ ಶುರುವಾಗಲಿದ್ದು, ಚುನಾವಣೆ ಮೂಲಕ ರಾಜ್ಯ ಬಿಜೆಪಿ ಘಟಕ ಅಧ್ಯಕ್ಷರ ಆಯ್ಕೆ ಮಾಡುತ್ತೇವೆ. ಬೂತ್ ಕಮಿಟಿ ಅಧ್ಯಕ್ಷ ಸ್ಥಾನದಿಂದ ರಾಜ್ಯಾಧ್ಯಕ್ಷ ಸ್ಥಾನದವರೆಗೂ ಚುನಾವಣೆ ನಡೆಯಲಿದೆ ಎಂದು ಕೇಂದ್ರ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಹೇಳಿದರು.
ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಜ್ಯಾಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಯಾವುದೇ ಗೊಂದಲ ಇಲ್ಲ. ಎಲ್ಲರೂ ಸೇರಿ ಚರ್ಚಿಸಿ ರಾಜ್ಯಾಧ್ಯಕ್ಷರನ್ನು ಆಯ್ಕೆ ಮಾಡುತ್ತೇವೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಕರ್ನಾಟಕ ವಿಕಾಸಕ್ಕೆ ಆದ್ಯತೆ ಕೊಡುತ್ತೇವೆ ಎಂದು ಕರ್ನಾಟಕ ಬಿಜೆಪಿ ಚುನಾವಣಾಧಿಕಾರಿ ಶಿವರಾಜ್ ಸಿಂಗ್ ಚೌಹಾಣ್ ಹೇಳಿದರು.
ಕರ್ನಾಟಕಕ್ಕೆ ಬರಬೇಕಾದ ಅನುದಾನ ಕೇಂದ್ರ ಸರ್ಕಾರದಿಂದ ಸಮರ್ಪಕವಾಗಿ ಬರುತ್ತಿಲ್ಲ ಎಂಬ ರಾಜ್ಯ ಕಾಂಗ್ರೆಸ್ ಮುಖಂಡರ ಆರೋಪದ ವಿಚಾರವಾಗಿ ಮಾತನಾಡಿದ ಅವರು, ಬಿಡುಗಡೆ ಮಾಡಿರುವ ಅನುದಾನ ಸದ್ಬಳಕೆಯಾಗಲಿ. ಅವರು ಅನುದಾನ ಕೇಳದಿದ್ದರೂ ನಾವೇ ಘೋಷಣೆ ಮಾಡಿದ್ದೇವೆ. ಬಹಳಷ್ಟು ಅನುದಾನ ಕೊಟ್ಟರೂ ಕರ್ನಾಟಕ ಸರ್ಕಾರ ಬಳಕೆ ಮಾಡಿಲ್ಲ ಎಂದು ವಾಗ್ದಾಳಿ ಮಾಡಿದರು.
ಕರ್ನಾಟಕದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರ ನೇಮಕದ ವಿಚಾರದಲ್ಲಿ ಸ್ವಪಕ್ಷದಲ್ಲೇ ವಿರೋಧ ಕೇಳಿಬಂದಿತ್ತು. ಪಕ್ಷದ ಕೆಲ ಹಿರಿಯ ಮುಖಂಡರು ಬಿವೈ ವಿಜಯೇಂದ್ರ ಆಯ್ಕೆಗೆ ಪರೋಕ್ಷವಾಗಿ ಅಸಮಾಧಾನ ಹೊರ ಹಾಕಿದ್ದರು. ಪಕ್ಷದಲ್ಲಿ ಎದ್ದಿದ್ದ ಅಸಮಾಧನ ಹೈಕಮಾಂಡ್ ಮಧ್ಯ ಪ್ರವೇಶದಿಂದ ಬೂದಿ ಮುಚ್ಚಿದ ಕೆಂಡದಂತಿದೆ. ಹೀಗಾಗಿ, ರಾಜ್ಯಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸಲು ಹೈಕಮಾಂಡ್ ನಿರ್ಧರಿಸಿದೆ.