ಟೆಕ್ಸಾಸ್ : ಅಮೆರಿಕದಲ್ಲಿ ಇಂಡಿಯಾ ಗ್ಲೋಬಲ್ ಫೋರಂ ಉದ್ಘಾಟನೆಯ ನಂತರ ಭಾರತದ ಉದ್ಯಮ ವಲಯದ ಪ್ರತಿನಿಧಿಗಳು ಹಾಗೂ ಗಣ್ಯರನ್ನು ಟೆಕ್ಸಾಸ್ನ ಸ್ಪೇಸ್ ಎಕ್ಸ್ ಸ್ಟಾರ್ಬೇಸ್ಗೆ ಆಹ್ವಾನಿಸಿದ ಉದ್ಯಮಿ ಎಲಾನ್ ಮಸ್ಕ್, ಸಂವಾದ ನಡೆಸಿದ್ದಾರೆ.
ಅಮೆರಿಕ ಮತ್ತು ಭಾರತದ ನಡುವಿನ ವಾಣಿಜ್ಯ ವ್ಯವಹಾರಗಳ ಅಡೆತಡೆಗಳ ನಿವಾರಣೆ ನಿಟ್ಟಿನಲ್ಲಿ ಸಂವಾದ ನಡೆದಿದ್ದು, ತಂತ್ರಜ್ಞಾನದ ಕ್ಷೇತ್ರದಲ್ಲಿ ಅಮೆರಿಕ ಮತ್ತು ಭಾರತದ ನಡುವಿನ ಗಾಢ ಸಹಯೋಗದ ಕಲ್ಪನೆಯೊಂದಿಗೆ ಮಸ್ಕ್ ಈ ಕಾರ್ಯಕ್ರಮ ಆಯೋಜಿಸಿದ್ದರು.
ಹಣಕಾಸು ಕ್ಷೇತ್ರದಲ್ಲಿ ತಂತ್ರಜ್ಞಾನದ ಪಾತ್ರ, ಬಾಹ್ಯಾಕಾಶ ಮತ್ತು ಎಐ (ಕೃತಕ ಬುದ್ಧಿಮತ್ತೆ) ಆವಿಷ್ಕಾರಗಳಲ್ಲಿ ಪಾಲುದಾರಿಕೆಗೆ ಸಂಬಂಧಿಸಿ ಮಸ್ಕ್ ಹಾಗೂ ಭಾರತದ ಗಣ್ಯರು ಚರ್ಚೆ ನಡೆಸಿದ್ದಾರೆ. ಉದ್ಯಮ ಕ್ಷೇತ್ರದಲ್ಲಿನ ಭಾರತದ ಸಾಧನೆಯನ್ನು ಜಗತ್ತಿಗೆ ಪರಿಚಯಿಸುವ ನಿಟ್ಟಿನಲ್ಲಿ ಇಂಡಿಯಾ ಗ್ಲೋಬಲ್ ಫೋರಂ ಅನ್ನು ಸ್ಥಾಪನೆ ಮಾಡಲಾಗಿದೆ. ಅಮೆರಿಕ ಹಾಗೂ ಭಾರತದ ನಡುವಣ ಉದ್ಯಮ ಅಡೆತಡೆಗಳ ನಿವಾರಣೆಯ ಉದ್ದೇಶವನ್ನೂ ಇದು ಹೊಂದಿದೆ.
ಭಾರತದ ಉದ್ಯಮ ಪ್ರತಿನಿಧಿಗಳ ಹಾಗೂ ಗಣ್ಯರ ನಿಯೋಗದಲ್ಲಿ ಎಸ್ಸಾರ್ ಕ್ಯಾಪಿಟಲ್ ನಿರ್ದೇಶಕ ಪ್ರಶಾಂತ್ ರೂಯಾ, ಕೋಟಕ್‌ನ ಜೇ ಕೋಟಕ್, ಇನೋವ್8 ಸಂಸ್ಥಾಪಕ ರಿತೇಶ್ ಮಲಿಕ್, ಓಯೋ ಸಂಸ್ಥಾಪಕ ರಿತೇಶ್ ಮಲಿಕ್, ಫ್ಲಿಪ್‌ಕಾರ್ಟ್ ಸಿಇಒ ಕಲ್ಯಾಣ್ ರಾಣಾ, ಆದಿತ್ಯ ಬಿರ್ಲಾ ಮ್ಯಾನೇಜ್‌ಮೆಂಟ್‌ನಿಂದ ಆರ್ಯಮನ್ ಬಿರ್ಲಾ, ಲೇಖಕ ಅಮಿಶ್ ತ್ರಿಪಾಠಿ ಸೇರಿದಂತೆ ಹಲವು ಮಂದಿ ಇದ್ದರು.
ಟೆಕ್ಸಾಸ್ನ ಸ್ಪೇಸ್ ಎಕ್ಸ್ ಸ್ಟಾರ್ಬೇಸ್ನಲ್ಲಿ ಭಾರತೀಯ ಉದ್ಯಮಿಗಳ ಜತೆ ಸಂವಾದ ನಡೆಸಿದ ಮಸ್ಕ್, ಭಾರತವು ಪ್ರಾಚೀನ ನಾಗರಿಕತೆಗಳಲ್ಲಿ ಒಂದಾಗಿದೆ ಮತ್ತು ಅತ್ಯಂತ ಶ್ರೇಷ್ಠ ನಾಗರಿಕತೆಯಾಗಿದೆ. ಅಮೆರಿಕ ಮತ್ತು ಭಾರತದ ನಡುವೆ ಆಳವಾದ ಸಹಕಾರದ ಸಾಧ್ಯತೆಯನ್ನು ಒತ್ತಿ ಹೇಳಿದ ಮಸ್ಕ್, ವಿಶೇಷವಾಗಿ ತಂತ್ರಜ್ಞಾನ ಮತ್ತು ಬಾಹ್ಯಾಕಾಶ ಪರಿಶೋಧನೆಯಂತಹ ಕ್ಷೇತ್ರಗಳಲ್ಲಿ ಸಕಾರಾತ್ಮಕ ಬದಲಾವಣೆ ಕಂಡುಬರುತ್ತಿದೆ.
ಅಮೆರಿಕ ಮತ್ತು ಭಾರತದ ನಡುವಿನ ವಹಿವಾಟು ಹೆಚ್ಚಿಸಲು ಹಾಗೂ ವ್ಯಾಪಾರ ಅಡೆತಡೆಗಳನ್ನು ಕಡಿಮೆ ಮಾಡುವ ವಿಚಾರದಲ್ಲಿ ಖಂಡಿತವಾಗಿಯೂ ನಿಮ್ಮ ಜತೆಗೆ ಇದ್ದೇನೆ ಎಂದು ಮಸ್ಕ್ ಭರವಸೆ ನೀಡಿದ್ದಾರೆ. ತಂತ್ರಜ್ಞಾನ, ಉತ್ಪಾದನೆಯಿಂದ ತೊಡಗಿ ನವೀಕರಿಸಬಹುದಾದ ಇಂಧನದವರೆಗಿನ ವೈವಿಧ್ಯಮಯ ವಲಯಗಳ ಮಸ್ಕ್ ಹಾಗೂ ಭಾರತೀಯ ಉದ್ಯಮ ಪ್ರತಿನಿಧೀಗಳು ಚರ್ಚೆ ನಡೆಸಿದರು.