ಬೆಳಗಾವಿ : ರಾಜ್ಯ ಬಿಜೆಪಿಯಲ್ಲಿ ಬಣ ರಾಜಕೀಯ ಮತ್ತೆ ತೀವ್ರ ಸ್ವರೂಪ ಪಡೆದುಕೊಂಡಿದ್ದು, ನಿಮ್ಮಪ್ಪನ ಮುಖ್ಯಮಂತ್ರಿ ಮಾಡಲು ನಾನು ಶಾಸಕ ಸ್ಥಾನ ತ್ಯಾಗ ಮಾಡಿದ್ದೆ ಎಂದು ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಅವರು ನಾಲಿಗೆ ಬಿಗಿ ಹಿಡಿದು ಮಾತಾಡಿ ಎಂದಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರಿಗೆ ತಿರುಗೇಟು ನೀಡಿದ್ದಾರೆ.
ಬೆಳಗಾವಿ ಜಿಲ್ಲೆಯ ಅಂಕಲಗಿ ಗ್ರಾಮದಲ್ಲಿ ಸಾರ್ವಜನಿಕ ಸಭೆಯೊಂದನ್ನು ಉದ್ದೇಶಿಸಿ ಮಾತಾಡಿದ ರಮೇಶ್ ಜಾರಕಿಹೊಳಿ, ನಾನು ನಿಮ್ಮಪ್ಪನ್ನೇ ಸಿಎಂ ಮಾಡೋದಕ್ಕೆ ಬಿಜೆಪಿಗೆ ಬಂದಿದ್ದು ವಿಜಯೇಂದ್ರಾ ಎಂದು ಏಕವಚನದಲ್ಲಿ ವಾಗ್ದಾಳಿ ನಡೆಸಿದರು.
ವಿಜಯೇಂದ್ರ ನೀನು ಇನ್ನೂ ಬಚ್ಚಾ ಇದ್ದೀಯಾ ರಾಜ್ಯಾಧ್ಯಕ್ಷ ಆಗೋದಕ್ಕೆ ನೀನಗೆ ಯೋಗ್ಯತೆಯಿಲ್ಲ. ಯಡಿಯೂರಪ್ಪ ಬಗ್ಗೆ ನನಗೆ ಈಗಲೂ ಗೌರವವಿದೆ. ಅಗೌರವದಿಂದ ಮಾತನಾಡಿಲ್ಲ. ಈಗಲೂ ಯಡಿಯೂರಪ್ಪ ನಮ್ಮ ನಾಯಕರಿದ್ದಾರೆ ಎಂದರು.
ಪಕ್ಷದ ಅಧ್ಯಕ್ಷ ಸ್ಥಾನದ ಬಗ್ಗೆ ನನಗೆ ಗೌರವವಿದೆಯೇ ಹೊರತು ವಿಜಯೇಂದ್ರ ಬಗ್ಗೆ ಇಲ್ಲ. ನಾನು ಓಡಾಡೋಕೆ ಆಗೋದಿಲ್ಲ ಎಂದಿರುವೆ. ಆದರೆ, ನಿನ್ನನ್ನು ಓಡಾಟ ಮಾಡದ ಹಾಗೆ ಮಾಡೋ ತಾಕತ್ತು ನನಗೆ ದೇವರು ಕೊಟ್ಟಿದ್ದಾನೆ. ಆದರೆ, ನಾನು ಹಾಗೆ ಮಾಡೋದಿಲ್ಲ ಎಂದು ಗೋಕಾಕ ಶಾಸಕ ಹೇಳಿದರು.
ಇವತ್ತು ನಾನು ಯಡಿಯೂರಪ್ಪಗೆ ಸಲಹೆ ಕೊಡುವೆ. ಯಡಿಯೂರಪ್ಪ ನೀವು ವಿಜಯೇಂದ್ರ ಬೆನ್ನು ಹತ್ತಿ ಹಾಳಾಗುತ್ತಿದ್ದೀರಿ. ಒಳ್ಳೆಯ ಅಧ್ಯಕ್ಷರನ್ನು ನೇಮಕ ಮಾಡೋದಕ್ಕೆ ಸಹಕಾರ ಕೊಡಿ, ಪದೇ ಪದೇ ಸೈಕಲ್ ನಿಂದ ಓಡಾಟ ಮಾಡಿದ್ದೇನೆ ಎನ್ನಬೇಡಿ. ಪಕ್ಷದಿಂದ ಅದರ ಸಾವಿರ ಪಟ್ಟು ಲಾಭವನ್ನ ಪಡೆದಿರುವಿರಿ ಎಂದು ವಾಗ್ದಾಳಿ ನಡೆಸಿದರು.