ಚಾಂಪಿಯನ್ಸ್ ಟ್ರೋಫಿಗಾಗಿ ಭಾರತ ತಂಡವನ್ನು ಘೋಷಿಸಲಾಗಿದ್ದು, ಟೀಮ್ ಇಂಡಿಯಾ ಪ್ರಕಟಣೆಗೆ ಸುದ್ದಿಗೋಷ್ಠಿ ಕರೆದಿದ್ದರೂ, ಭಾರತ ತಂಡದ ಘೋಷಣೆಯಾಗಿದ್ದು. ಹೀಗೆ ಟೀಮ್ ಇಂಡಿಯಾ ಘೋಷಣೆ ವಿಳಂಬವಾಗಲು ಮುಖ್ಯ ಕಾರಣ ರೋಹಿತ್ ಶರ್ಮಾ ಹಾಗೂ ಕೋಚ್ ಗೌತಮ್ ಗಂಭೀರ್ ನಡುವಣ ಭಿನ್ನಾಭಿಪ್ರಾಯ ಎಂಬುದು ಬಹಿರಂಗವಾಗಿದೆ.

ಆಯ್ಕೆ ಸಮಿತಿಯೊಂದಿಗೆ ಚರ್ಚಿಸಿ ರೋಹಿತ್ ಶರ್ಮಾ ಭಾರತ ತಂಡವನ್ನು ಆಯ್ಕೆ ಮಾಡಿದ್ದರು. ಈ ಪಟ್ಟಿಯೊಂದಿಗೆ ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್ ಅಗರ್ಕರ್ ಹಾಗೂ ರೋಹಿತ್ ಶರ್ಮಾ ವಾಂಖೆಡೆ ಸ್ಟೇಡಿಯಂನಲ್ಲಿ ಪ್ರೆಸ್​ ಕಾನ್ಫರೆನ್ಸ್ ರೂಮ್​ಗೆ 12 ಗಂಟೆಗೆ ಆಗಮಿಸಿದ್ದರು. ಆದರೆ ಇನ್ನೇನು ಟೀಮ್ ಇಂಡಿಯಾ ಘೋಷಣೆಯಾಗಲಿದೆ ಅನ್ನುವಷ್ಟರಲ್ಲಿ ತೆರೆಮರೆಯಲ್ಲಿ ಗಂಭೀರ ಚರ್ಚೆ ನಡೆದಿದೆ.

ಈ ಚರ್ಚೆಯ ನಡುವೆ ಗೌತಮ್ ಗಂಭೀರ್ ಟೀಮ್ ಇಂಡಿಯಾ ಉಪ ನಾಯಕನಾಗಿ ಹಾರ್ದಿಕ್ ಪಾಂಡ್ಯರನ್ನು ಆಯ್ಕೆ ಮಾಡುವಂತೆ ಪಟ್ಟು ಹಿಡಿರುವುದಾಗಿ ವರದಿಯಾಗಿದೆ. ಆದರೆ ಅಜಿತ್ ಅಗರ್ಕರ್ ಹಾಗೂ ರೋಹಿತ್ ಶರ್ಮಾ, ಶುಭ್​ಮನ್ ಗಿಲ್​ ಪರ ವಹಿಸಿದ್ದರು. ಅಲ್ಲದೆ ಅಗರ್ಕರ್ ತಮ್ಮ ನಿರ್ಧಾರವನ್ನು ಬದಲಿಸಲು ಸಿದ್ಧರಿರಲಿಲ್ಲ. ಹೀಗಾಗಿ ಗಿಲ್ ಅವರನ್ನೇ ವೈಸ್ ಕ್ಯಾಪ್ಟನ್ ಆಗಿ ಆಯ್ಕೆ ಮಾಡಲಾಗಿದೆ.

ಇನ್ನು ಟೀಮ್ ಇಂಡಿಯಾದ ವಿಕೆಟ್ ಕೀಪರ್ ಆಗಿ ಸಂಜು ಸ್ಯಾಮ್ಸನ್ ಅವರಿಗೆ ಸ್ಥಾನ ನೀಡಬೇಕೆಂದು ಗೌತಮ್ ಗಂಭೀರ್ ಆಗ್ರಹಿಸಿದ್ದರು. ಆದರೆ ರೋಹಿತ್ ಶರ್ಮಾ, ರಿಷಭ್ ಪಂತ್ ಪರ ನಿಂತಿದ್ದರು. ಪಂತ್​ಗಿಂತ ಸ್ಯಾಮ್ಸನ್ ಅವರ ಪ್ರದರ್ಶನ ಉತ್ತಮವಾಗಿದೆ ಎಂದು ಗಂಭೀರ್ ಮನವೊಲಿಸಲು ಯತ್ನಿಸಿದರೂ, ರೋಹಿತ್ ಶರ್ಮಾ ಹಾಗೂ ಅಜಿತ್ ಅಗರ್ಕರ್ ರಿಷಭ್ ಪಂತ್ ಅವರ ಆಯ್ಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

ಚಾಂಪಿಯನ್ಸ್ ಟ್ರೋಫಿಗೆ ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಶುಭ್​ಮನ್ ಗಿಲ್ (ಉಪನಾಯಕ), ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಕುಲ್ದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಅರ್ಷದೀಪ್ ಸಿಂಗ್, ಯಶಸ್ವಿ ಜೈಸ್ವಾಲ್, ರಿಷಭ್​ ಪಂತ್, ರವೀಂದ್ರ ಜಡೇಜಾ.

ಹೀಗೆ ಎರಡುವರೆ ಗಂಟೆಗಳ ಕಾಲ ನಡೆದ ಈ ಚರ್ಚೆಯಲ್ಲಿ ಕೊನೆಗೂ ರೋಹಿತ್ ಶರ್ಮಾ ತಮಗೆ ಬೇಕಾದಂತಹ ತಂಡವನ್ನು ಆಯ್ಕೆ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

Leave a Reply

Your email address will not be published. Required fields are marked *