ಹುಬ್ಬಳ್ಳಿ : ಮುಡಾ ಹಗರಣದ ತನಿಖೆಯ ಭಾಗವಾಗಿ 300 ಕೋಟಿ ಮೌಲ್ಯದ 142 ಸ್ಥಿರಾಸ್ತಿಗಳನ್ನು ಜಾರಿ ನಿರ್ದೇಶನಾಲಯ ಮುಟ್ಟುಗೋಲು ಹಾಕಿಕೊಂಡ ಬೆನ್ನಲ್ಲೇ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.
ಹುಬ್ಬಳ್ಳಿಯಲ್ಲಿ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು, ಇಡಿ ಕ್ರಮವು ಬೆಳಗಾವಿಯಲ್ಲಿ ಮುಂಬರುವ ‘ಜೈ ಬಾಪು, ಜೈ ಭೀಮ್, ಜೈ ಸಂವಿಧಾನ್’ ರ್ಯಾಲಿಗೆ ಸಾರ್ವಜನಿಕರಿಂದ ವ್ಯಕ್ತವಾಗುವ ಅಗಾಧ ಪ್ರತಿಕ್ರಿಯೆಗೆ ಮೋದಿ ಸರ್ಕಾರದ ಭಯದ ಪ್ರತಿಕ್ರಿಯೆಯಾಗಿದೆ ಎಂದು ಹೇಳಿದರು.
ಈ ಸಮಾವೇಶಕ್ಕೆ ತೊಂದರೆ ಕೊಡುವ ಕಾರಣಕ್ಕಾಗಿಯೇ ಮುಡಾ ವಿಚಾರದಲ್ಲಿ ಇ.ಡಿ.ಯ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಈ ಮೂಲಕ ಕಾಂಗ್ರೆಸ್ ನಾಯಕರ ನಿಯಂತ್ರಿಸುವ ಕೆಲಸ ಮಾಡುತ್ತಿದ್ದಾರೆ. ನಿತ್ಯವೂ ನೆಹರೂ, ಮನಮೋಹನ ಸಿಂಗ್, ಇಂದಿರಾ ಗಾಂಧಿ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ದಕ್ಷಿಣ ಭಾರತದಲ್ಲಿ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ ಸೇರಿದಂತೆ ಹಲವರನ್ನು ನಿತ್ಯವೂ ಗುರಿಯಾಗಿಸಿ ದಾಳಿ ಮಾಡುತ್ತಿದ್ದಾರೆ. ಇದೀಗ ಇ.ಡಿಯನ್ನು ಸಿದ್ದರಾಮಯ್ಯ ಅವರ ವಿರುದ್ಧ ದುರ್ಬಳಕೆ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ಬಿಜೆಪಿಯವರು ಸಂವಿಧಾನ ವಿರೋಧಿಗಳು, ಅವರು ಯಾವಾಗಲೂ ಸಾಮಾಜಿಕ ನ್ಯಾಯದ ವಿರುದ್ಧ ಇರುವವರು. ಗೋಡ್ಸೆ ವಿಚಾರಧಾರೆಗಳ ಹೊಂದಿರುವ ಬಿಜೆಪಿಗರು ಗಾಂಧಿ ವಿಚಾರಗಳ ಒಪ್ಪುವುದಿಲ್ಲ. ಕಾಂಗ್ರೆಸ್ ಪಕ್ಷ ಸಂವಿಧಾನ ಉಳಿಸುವ ಅಂಬೇಡ್ಕರ್ ಹಾಗೂ ಗಾಂಧಿ ವಿಚಾರಗಳನ್ನು ಪಸರಿಸುವ ಕೆಲಸವನ್ನು ಸಮಾವೇಶದ ಮೂಲಕ ಮಾಡುತ್ತಿದ್ದೇವೆ ಹೀಗಾಗಿ ಪ್ರಧಾನಿ ಮೋದಿ ಸೇರಿದಂತೆ ಬಿಜೆಪಿ ನಾಯಕರು ಹೆದರಿದ್ದಾರೆ ಎಂದರು.
ಇದಕ್ಕೂ ಮುನ್ನ ಧಾರವಾಡ, ಗದಗ, ಹಾವೇರಿ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಪಕ್ಷದ ಮುಖಂಡರನ್ನು ಭೇಟಿ ಮಾಡಿದ ಸುರ್ಜೇವಾಲಾ ಮತ್ತು ಡಿಕೆ ಶಿವಕುಮಾರ್ ಸಮಾವೇಶದ ಕುರಿತು ಪಕ್ಷದ ಕಾರ್ಯಕರ್ತರನ್ನು ಕರೆತರುವ ಬಗ್ಗೆ ಚರ್ಚಿಸಿದರು. ಈ ನಾಲ್ಕು ಜಿಲ್ಲೆಗಳಿಂದ ಸುಮಾರು 70 ಸಾವಿರ ಕಾಂಗ್ರೆಸ್ ಕಾರ್ಯಕರ್ತರು ರ್ಯಾಲಿಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದು ಡಿಕೆಶಿ ಹೇಳಿದರು.