ನವದೆಹಲಿ : ಆಮ್ ಆದ್ಮಿ ಪಾರ್ಟಿ ಮುಖ್ಯಸ್ಥ ಅರವಿಂದ ಕೇಜ್ರಿವಾಲ್ ಅವರನ್ನು ಚುನಾವಣೆಯಲ್ಲಿ ಸೋಲಿಸಲು ಸಾಧ್ಯವಿಲ್ಲದ ಕಾರಣ ಬಿಜೆಪಿಯು ಅವರ ಹತ್ಯೆಗೆ ಪಿತೂರಿ ನಡೆಸುತ್ತಿದೆ ಎಂದು ದೆಹಲಿ ಮುಖ್ಯಮಂತ್ರಿ ಅತಿಶಿ ಅವರು ಆರೋಪಿಸಿದ್ದಾರೆ.

ಪಕ್ಷದ ಸಂಸದ ಸಂಜಯ್ ಸಿಂಗ್ ಅವರೊಂದಿಗೆ ಜಂಟಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅತಿಶಿ, ಕೇಜ್ರಿವಾಲ್ ಅವರ ಹತ್ಯೆಗೆ ಬಿಜೆಪಿ ಸಂಚು ರೂಪಿಸಿದೆ. ನಿನ್ನೆ ಸಂಜೆ ಅವರ ಕಾರಿನ ಮೇಲೆ ದಾಳಿ ನಡೆಸಿದ ಆರೋಪದಲ್ಲಿ ಭಾಗಿಯಾಗಿರುವ ವ್ಯಕ್ತಿಗಳಲ್ಲಿ ಒಬ್ಬಾತ ಎಎಪಿ ಸಂಚಾಲಕನ ವಿರುದ್ಧ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಪರ್ವೇಶ್ ವರ್ಮಾ ಅವರೊಂದಿಗೆ ಆಗಾಗ್ಗೆ ಕಾಣಿಸಿಕೊಳ್ಳುತ್ತಿದ್ದಾರೆ ಎಂದು ದೂರಿದ್ದಾರೆ.

ಕೇಜ್ರಿವಾಲ್ ಅವರು ಕ್ಷೇತ್ರದಲ್ಲಿ ಪ್ರಚಾರ ಮಾಡುತ್ತಿದ್ದಾಗ ಅವರ ಕಾರಿನ ಮೇಲೆ ಕಲ್ಲು ತೂರಾಟ ನಡೆಸಲಾಯಿತು. ಅವರು ಬಿಜೆಪಿ ಗೂಂಡಾಗಳು ಎಂದು ಎಎಪಿ ಆರೋಪಿಸಿದೆ. ಎಎಪಿಯ ಕಲ್ಲು ತೂರಾಟ ಆರೋಪಕ್ಕೆ ಪ್ರತಿಕ್ರಿಯಿಸಿದ ವರ್ಮಾ, ಎಎಪಿ ಮುಖ್ಯಸ್ಥರ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ, ಮೂವರು ಯುವಕರಿಗೆ ವಾಹನ ಡಿಕ್ಕಿ ಹೊಡೆದಿದೆ. ಅವರ ಮೇಲೆ ಕಾರನ್ನು ಹತ್ತಿಸಲು ಕೇಜ್ರಿವಾಲ್ ಅವರೇ ಚಾಲಕನಿಗೆ ಸೂಚಿಸಿದ್ದರು ಎಂದು ಆರೋಪಿಸಿದ್ದಾರೆ.

‘ಅರವಿಂದ ಕೇಜ್ರಿವಾಲ್ ಮೇಲೆ ದಾಳಿ ಮಾಡಿದ ಮತ್ತು ಅವರ ಕಾರಿಗೆ ಕಲ್ಲು ಎಸೆದ ಜನರು ದರೋಡೆ ಮತ್ತು ಕೊಲೆ ಯತ್ನ ಸೇರಿದಂತೆ ಗಂಭೀರ ಪ್ರಕರಣಗಳನ್ನು ಎದುರಿಸುತ್ತಿರುವ ಅಪರಾಧಿಗಳಾಗಿದ್ದಾರೆ. ಅರವಿಂದ ಕೇಜ್ರಿವಾಲ್ ಅವರನ್ನು ಹತ್ಯೆ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂಬುದು ಸ್ಪಷ್ಟವಾಗಿದೆ’ ಎಂದರು.

‘ವಿಧಾನಸಭಾ ಚುನಾವಣೆಯಲ್ಲಿ ನಮ್ಮನ್ನು ಸೋಲಿಸಲು ಬಿಜೆಪಿಗೆ ಸಾಧ್ಯವಾಗುತ್ತಿಲ್ಲ, ಹೀಗಾಗಿ ಅರವಿಂದ್ ಕೇಜ್ರಿವಾಲ್ ಅವರನ್ನು ತಮ್ಮ ದಾರಿಯಿಂದ ದೂರವಿಡಲು ಇಂತಹ ತಂತ್ರಗಳನ್ನು ಅನುಸರಿಸುತ್ತಿದ್ದಾರೆ’ ಎಂದು ಸಂಜಯ್ ಸಿಂಗ್ ತಿಳಿಸಿದರು.

Leave a Reply

Your email address will not be published. Required fields are marked *