ಪ್ರಯಾಗ್ರಾಜ್ : ಐತಿಹಾಸಿಕ ಮಹಾ ಕುಂಭಮೇಳದ ಟೆಂಟ್ ಸಿಟಿಯಲ್ಲಿ ಎರಡು ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಭಾರೀ ಅಗ್ನಿ ಅವಗಢ ಸಂಭವಿಸಿದೆ. ಸಿಲಿಂಡರ್ ಸ್ಫೋಟಗೊಂಡ ಕೆಲವೇ ಕ್ಷಣದಲ್ಲಿ ಅಕ್ಕಪಕ್ಕದ ಡೇರೆಗಳಿಗೂ ಅಗ್ನಿ ಜ್ವಾಲೆ ಧಗಧಗಿಸಿದೆ.
ಮಹಾ ಕುಂಭಮೇಳದ ಸೆಕ್ಟರ್ 19ರಲ್ಲಿ 2 ಸಿಲಿಂಡರ್ ಸ್ಫೋಟದಿಂದ ಅಗ್ನಿ ಅವಘಡ ಸಂಭವಿಸಿದ್ದು, ಹಲವು ಟೆಂಟ್ಗಳು ಸುಟ್ಟು ಭಸ್ಮವಾಗಿವೆ. ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಅಖಾರಾ ಪೊಲೀಸ್ ಠಾಣೆಯ ಉಸ್ತುವಾರಿ ಭಾಸ್ಕರ್ ಮಿಶ್ರಾ ತಿಳಿಸಿದ್ದಾರೆ.
ಬೆಂಕಿಬಿದ್ದ ಟೆಂಟ್ನಲ್ಲಿದ್ದ, ಜನರನ್ನು ಸುರಕ್ಷತಾ ದೃಷ್ಟಿಯಿಂದ ಸ್ಥಳಾಂತರಿಸಲಾಗಿದೆ. ಸದ್ಯಕ್ಕೆ ಯಾವುದೇ ಸಾವು ನೋವಾಗಿರುವ ಬಗ್ಗೆ ಮಾಹಿತಿ ಬಂದಿಲ್ಲ. ಮಹಾ ಕುಂಭದಲ್ಲಿ ಬೆಂಕಿ ನಂದಿಸುವ ಘಟನೆಯು ಎಲ್ಲರನ್ನೂ ಬೆಚ್ಚಿಬೀಳಿಸಿದೆ.
ಆಡಳಿಯ ಮಂಡಳಿಯು ರಕ್ಷಣಾ ಕ್ರಮ ಕೈಗೊಳ್ಳುವ ಜೊತೆಗೆ ಸಂತ್ರಸ್ತರಿಗೆ ಸೂಕ್ತ ಪರಿಹಾರ ಒದಗಿಸಲಿದೆ. ಅಲ್ಲದೇ ಪ್ರತಿಯೊಬ್ಬರ ಸುರಕ್ಷತೆಗಾಗಿ ನಾವು ಗಂಗಾ ದೇವಿಯನ್ನು ಪ್ರಾರ್ಥಿಸುತ್ತೇವೆ ಎಂಬುದಾಗಿ ಕುಂಭಮೇಳ ಆಡಳಿತ ಮಂಡಳಿ ತಿಳಿಸಿದೆ.