ಬೆಂಗಳೂರು : ತೆರಿಗೆ ಬಾಕಿದಾರರ ಆಸ್ತಿ ಹರಾಜಿಗೆ ಬಿಬಿಎಂಪಿ ಮುಂದಾಗಿದೆ. ಆ ಮೂಲಕ ದೀರ್ಘಕಾಲ ತೆರಿಗೆ ಬಾಕಿ ಉಳಿಸಿಕೊಂಡವರಿಗೆ ಪಾಲಿಕೆ ಶಾಕ್ ನೀಡಿದೆ. ಮುಂದಿನ ವಾರದಿಂದ ಒಂದೊಂದು ವಲಯದಲ್ಲಿ ಹರಾಜು ನಡೆಯಲಿದ್ದು, ಈ ಕುರಿತು ಬಿಬಿಎಂಪಿಯ ಕಂದಾಯ ವಿಭಾಗದಿಂದ ಆದೇಶ ಹೊರಡಿಸಲಾಗಿದೆ. ಜೊತೆಗೆ ಬಾಕಿದಾರರು ಶೀಘ್ರ ಬಾಕಿ ತೆರಿಗೆ ಪಾವತಿಸಲು ಸೂಚಿಸಲಾಗಿದೆ.
ಹಲವು ಬಾರಿ ನೋಟಿಸ್ ನೀಡಿದರೂ ಪಾವತಿಸಲು ಬಾಕಿದಾರರ ಹಿಂದೇಟು ಹಾಕಿದ್ದಾರೆ. ಹಾಗಾಗಿ ಸ್ಥಿರಾಸ್ತಿಗಳನ್ನು ಮಾರಾಟ ಮಾಡಿ ತೆರಿಗೆ ಬಾಕಿ ಜಮಾಗೆ ಬಿಬಿಎಂಪಿ ಪ್ಲ್ಯಾನ್ ಮಾಡಿದೆ. ಹರಾಜಿನಲ್ಲಿ ಬಂದ ಹಣದಿಂದ ತೆರಿಗೆ ವಸೂಲಿಗೆ ತಯಾರಿ ಮಾಡಲಾಗಿದೆ. ತೆರಿಗೆ ಪಾವತಿಸದ 2 ಲಕ್ಷ ಆಸ್ತಿಗಳನ್ನು ಈಗಾಗಲೇ ಪಾಲಿಕೆ ಗುರುತಿಸಿದೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ 2024-25ರ ಆಸ್ತಿ ತೆರಿಗೆ ಸಂಗ್ರಹ ಗುರಿ ಶೇಕಡಾ 83 ರಷ್ಟು ಸಾಧಿಸಿದೆ. ಇನ್ನೂ ಎರಡೂವರೆ ತಿಂಗಳುಗಳು ಬಾಕಿ ಉಳಿದಿದೆ. ಬಿಬಿಎಂಪಿಯು ಈ ಆರ್ಥಿಕ ವರ್ಷದಲ್ಲಿ ಆಸ್ತಿ ತೆರಿಗೆ ಸಂಗ್ರಹಕ್ಕೆ 5,210 ಕೋಟಿ ರೂ. ಗುರಿಯನ್ನು ಹೊಂದಿತ್ತು. ಆದರೆ ಈಗಾಗಲೇ 4,370 ಕೋಟಿ ರೂ. ಸಂಗ್ರಹಿಸಿದೆ.
ನವೆಂಬರ್ ಅಂತ್ಯದಲ್ಲಿ ಮುಕ್ತಾಯಗೊಂಡ ಒನ್-ಟೈಮ್ ಸೆಟ್ಲ್ಮೆಂಟ್ (OTS) ಯೋಜನೆಯ ಯಶಸ್ವಿ ಅನುಷ್ಠಾನವೇ ಇಷ್ಟೊಂದು ತೆರಿಗೆ ಸಂಗ್ರಹವಾಗಲು ಕಾರಣ ಎಂದು ಬಿಬಿಎಂಪಿ ಅಧಿಕಾರಿಯೊಬ್ಬರು ಹೇಳಿದ್ದರು. ದೀರ್ಘಾವಧಿ ಬಾಕಿ ಉಳಿದಿರುವ ತೆರಿಗೆದಾರರನ್ನು ಗುರುತಿಸಲಾಗಿದೆ.