ಉಡುಪಿ : ಮುಂದಿನ ವಿಧಾನಸಭಾ ಚುನಾವಣೆಗೆ ನಾನು ಸ್ಪರ್ಧಿಸುತ್ತೇನೆ. ಬಿಜೆಪಿಯಲ್ಲಿ ನಿಲ್ಲಬಹುದು ಅಥವಾ ಪಕ್ಷೇತರನಾಗಿ ಸ್ಪರ್ಧಿಸಬಹುದು ಎಂದು ಉಡುಪಿ ಮಾಜಿ ಶಾಸಕ ಬಿಜೆಪಿಯ ಉಚ್ಚಾಟಿತ ನಾಯಕ ರಘುಪತಿ ಭಟ್ ಹೇಳಿದ್ದಾರೆ. ಉಡುಪಿಯಲ್ಲಿ ಪತ್ರಿಕಾಗೋಷ್ಠಿ ವೇಳೆ ಮಾತನಾಡಿದ ಅವರ ಹೇಳಿಕೆ ಚರ್ಚೆಗೆ ಗ್ರಾಸವಾಗಿದೆ.
ಇನ್ನೊಂದು ಬಾರಿ ವಿಧಾನಸಭೆಗೆ ಸ್ಪರ್ಧಿಸಬೇಕು ಎಂದು ನಿರ್ಧರಿಸಿದ್ದೇನೆ. ಜನತೆ ನನ್ನನ್ನು ಈವರೆಗೆ ಸೋಲಿಸಿಲ್ಲ. ಉಡುಪಿ ವಿಧಾನಸಭಾ ಕ್ಷೇತ್ರದಿಂದ ನಾನು ಮೂರು ಬಾರಿಗೆ ಗೆದ್ದಿದ್ದೇನೆ. ಇನ್ನೂ ಮೂರುವರೆ ವರ್ಷ ಇದೆ. ಯಾವ ಪಕ್ಷದಿಂದ ಸ್ಪರ್ಧಿಸಬೇಕು ಎಂದು ಮುಂದೆ ನಿರ್ಧರಿಸುತ್ತೇನೆಂದು ರಘುಪತಿ ಭಟ್ ಉಡುಪಿಯ ಗುಂಡಿಬೈಲಿನಲ್ಲಿ ಮಾತನಾಡಿದ್ದಾರೆ.
ಬಿಜೆಪಿ ಸೇರ್ಪಡೆ ಬಗ್ಗೆ ಉತ್ತರಿಸಿದ ಅವರು, ಪಕ್ಷ ಕರೆದರೆ ನಾನು ಬಿಜೆಪಿಗೆ ಸೇರುತ್ತೇನೆ. ಸದ್ಯದ ಬೆಳವಣಿಗೆಗಳನ್ನು ನೋಡುತ್ತಿರುವಾಗ ಬಿಜೆಪಿಗೆ ನನ್ನ ಅವಶ್ಯಕತೆ ಇಲ್ಲ ಅಂತ ಅನ್ನಿಸಿರಬೇಕು. ಹಾಗಾಗಿ ಬಿಜೆಪಿ ನನ್ನನ್ನು ಆಹ್ವಾನಿಸುತ್ತಿಲ್ಲ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಸೇರ್ಪಡೆ ಮತ್ತು ಇತರ ಯಾವುದೇ ಚರ್ಚೆ ನಡೆದಿಲ್ಲ. ಕಾಂಗ್ರೆಸ್‌ನ ಯಾರೂ ನನ್ನನ್ನು ಭೇಟಿ ಆಗಿಲ್ಲ. ನಾನೂ ಯಾರನ್ನೂ ಭೇಟಿ ಆಗಿಲ್ಲ. ಬಿಜೆಪಿಯ ಪ್ರಾಥಮಿಕ ಸದಸ್ಯತ್ವಕ್ಕೆ ಮಿಸ್ ಕಾಲ್ ಕೊಟ್ಟಿದ್ದೇನೆ. ಸ್ಥಾನೀಯ ಸಮಿತಿ, ನಗರ ಸಮಿತಿ ಅಪ್ರೋವ್ ಮಾಡುತ್ತದೋ ಇಲ್ಲವೋ ಗೊತ್ತಿಲ್ಲ ಎಂದರು.
ಉಡುಪಿಯ ರಾಜಕಾರಣದಲ್ಲಿ ಇಂತಹ ರಾಜಕಾರಣಿ ನೋಡಿಲ್ಲ. ನಾನು ಮಾಜಿ ಶಾಸಕರಾದ ಯುಆರ್ ಸಭಾಪತಿ, ಪ್ರಮೋದ್ ಮಧ್ವರಾಜ ಎಲ್ಲರನ್ನೂ ಫೇಸ್ ಮಾಡಿದ್ದೇನೆ. ಈ ರೀತಿಯ ದ್ವೇಷ ರಾಜಕೀಯ ಶೋಭೆಯಲ್ಲ. ಮೂರು ಬಾರಿ ಶಾಸಕನನ್ನು ನಡೆಸಿಕೊಳ್ಳುವ ರೀತಿಯಾ ಇದು? ಒಳ್ಳೆಯದಲ್ಲ.. ನಾನು ತಂದ ಸ್ಮಾರ್ಟ್ ಸಿಟಿ ಯೋಜನೆ ಅಡ್ಡಗಾಲು ಇಟ್ಟರು. ಸಿಗ್ನಲ್, ಡಿಜಿಟಲ್ ಇನ್ಫ್ರಾಸ್ಟ್ರಕ್ಚರ್, ಎಲ್ಇಡಿ ಬದಲಾವಣೆ.. ಎಲ್ಲ ಯೋಜನೆಗೂ ಅಡ್ಡಿಪಡಿಸಿದ್ದಾರೆ ಎಂದು ಭಟ್ ದೂರಿದರು ಎನ್ನಲಾಗಿದೆ.