ಬೆಂಗಳೂರು : ‘ಏರೋ ಇಂಡಿಯಾ 2025’ ಏರ್ ಶೋಗೆ ದಿನಗಣನೆ ಆರಂಭವಾಗಿದೆ. ಫೆಬ್ರವರಿ 10 ರಿಂದ 14 ರವರಗೆ ಯಲಹಂಕದಲ್ಲಿ ಏರ್ ಶೋ ನಡೆಯಲಿರುವ ಕಾರಣ ಬೆಂಗಳೂರು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿನ ವಿಮಾನಗಳ ಕಾರ್ಯಾಚರಣೆ ಮೇಲೆಯೂ ಪರಿಣಾಮವಾಗಲಿದೆ.

ಏರ್ ಶೋ ವೇಳೆ‌‌‌ ನಿಗದಿತ ಸಮಯದಲ್ಲಿ ವಿಮಾನಗಳ‌ ಹಾರಾಟ ಬಂದ್ ಆಗಲಿದೆ. ಲ್ಯಾಂಡಿಂಗ್ ಹಾಗೂ ಟೇಕಾಫ್​ಗಳು ಇರುವುದಿಲ್ಲ. ಹೀಗಾಗಿ ಏರ್​​ಲೈನ್ಸ್ ಸಿಬ್ಬಂದಿಯಿಂದ ಮಾಹಿತಿ ಪಡೆದುಕೊಂಡು ಬರುವಂತೆ ಪ್ರಯಾಣಿಕರಿಗೆ ಸೂಚಿಸಲಾಗಿದೆ.

ಏರ್ ಶೋ ವೇಳೆ ವಾಯುಪಡೆ ವಿಮಾನಗಳ ಹಾರಾಟಕ್ಕೆ ಅಡ್ಡಿಯಾಗದಂತೆ ಮುಂಜಾಗ್ರತಾ ಕ್ರಮವಾಗಿ ಕೆಂಪೇಗೌಡ ಏರ್​​ಪೋರ್ಟ್​​ನಿಂದ ಟೇಕಾಫ್ ಮತ್ತು ಲ್ಯಾಂಡಿಂಗ್ ಸ್ಥಗಿತಗೊಳಿಸಲಾಗುತ್ತದೆ.

ಫೆಬ್ರವರಿ 5 ರಿಂದ 8 ರವರೆಗೆ ಬೆಳಗ್ಗೆ 9 ಗಂಟೆಯಿಂದ 12 ಮತ್ತು ಮಧ್ಯಾಹ್ನ 2 ರಿಂದ ಸಂಜೆ 5 ಗಂಟೆವರೆಗೂ ವಿಮಾನಗಳ ಹಾರಾಟಕ್ಕೆ ನಿರ್ಬಂಧವಿದೆ. ಫೆಬ್ರವರಿ 09 ರಂದು ಬೆಳಗ್ಗೆ 9 ರಿಂದ 12 ಗಂಟೆವರೆಗೂ ವಿಮಾನಗಳ ಹಾರಾಟ ಸ್ಥಬ್ದವಾಗಲಿದೆ.

ಫೆಬ್ರವರಿ 10 ರಂದು ಬೆಳಗ್ಗೆ 9 ಗಂಟೆಯಿಂದ 12 ಮತ್ತು ಮಧ್ಯಾಹ್ನ 2 ರಿಂದ ಸಂಜೆ 4 ಗಂಟೆ ವರೆಗೂ ವಿಮಾನ ಕಾರ್ಯಾಚರಣೆ ಇರುವುದಿಲ್ಲ. ಫೆಬ್ರವರಿ 11 ಮತ್ತು 12 ರಂದು 12 ಗಂಟೆಯಿಂದ 3 ಗಂಟೆವರೆಗೂ ವಿಮಾನಗಳ ಹಾರಾಟಕ್ಕೆ ನಿರ್ಬಂಧ ಹೇರಲಾಗಿದೆ.

ಫೆಬ್ರವರಿ 13 ಮತ್ತು 14 ರಂದು ಬೆಳಗ್ಗೆ 9 ರಿಂದ 12 ಗಂಟೆ ಮತ್ತು ಮದ್ಯಾಹ್ನ 2 ಗಂಟೆಯಿಂದ ಸಂಜೆ 5 ಗಂಟೆವರೆಗೂ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನಗಳ ಕಾರ್ಯಾಚರಣೆ ಇರುವುದಿಲ್ಲ ಎಂದು ತಿಳಿಸಿದೆ.

ಏಷ್ಯಾದ ಅತಿ ದೊಡ್ಡ ಏರ್ ಶೋ ಯಲಹಂಕದ ವಾಯನೆಲೆಯಲ್ಲಿ ಫೆಬ್ರವರಿ 10 ರಿಂದ 14 ರವರಗೆ ನಡೆಯಲಿದ್ದು ದೇಶ ವಿದೇಶಗಳ ಅನೇಕ ಗಣ್ಯರು, ಉದ್ಯಮಿಗಳು, ವಾಯುಪಡೆಗಳ ಸಿಬ್ಬಂದಿ ಆಗಮಿಸಲಿದ್ದಾರೆ. ಆಕರ್ಷಕ ಏರ್ ಶೋ ಕೂಡ ನಡೆಯಲಿದೆ. ಏರ್ ಶೋಗೆ ಆಗಮಿಸುವವರಿಗೆ ಪಾರ್ಕಿಂಗ್ ವ್ಯವಸ್ಥೆ, ಉಚಿತ ಬಸ್ ವ್ಯವಸ್ಥೆಯನ್ನು ವಾಯುಪಡೆ ಮಾಡುತ್ತಿದೆ. 15ನೇ ಆವೃತ್ತಿಯ ಏರ್ ಶೋ ಇದಾಗಿದ್ದು, ಲಕ್ಷಾಂತರ ಜನ ಆಗಮಿಸುವ ನಿರೀಕ್ಷೆ ಇದೆ ಎನ್ನಲಾಗಿದೆ.

Leave a Reply

Your email address will not be published. Required fields are marked *