ಕಾರವಾರ : ಸಿ.ಟಿ ರವಿ ಹಾಗೂ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಪ್ರಕರಣವನ್ನು ಪರಿಷತ್ತಿನ ನೀತಿ ನಿರೂಪಣಾ ಸಮಿತಿಗೆ ನೀಡಲಾಗಿದೆ. ಅವರು ವೀಡಿಯೋ ಸೇರಿದಂತೆ ಇತರೆ ದಾಖಲೆಗಳನ್ನು ಪರಿಶೀಲಿಸಿ ವರದಿ ನೀಡಿದ ಬಳಿಕ ತಿರ್ಮಾನ ಕೈಗೊಳ್ಳಲಾಗುತ್ತದೆ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.

ಶಿರಸಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪರಿಷತ್ ಉಪ ಸಭಾಪತಿಗಳು ಅಧ್ಯಕ್ಷರಾಗಿರುವ ಸದನದ ನೀತಿ ನಿರೂಪಣಾ ಸಮಿತಿಗೆ ಪ್ರಕರಣವನ್ನು ವಹಿಸಲಾಗಿದೆ. ಅದರಲ್ಲಿ ಸಿ.ಟಿ ರವಿಯೂ ಸದಸ್ಯರಾಗಿದ್ದರು. ಅವರನ್ನು ಈಗ ಹೊರಗೆ ಇಡಲಾಗಿದೆ. ಸಮಿತಿಯವರು ಸದನದ ಆಡಿಯೋ, ವೀಡಿಯೋ ಪರಿಶೀಲನೆ ಮಾಡಲಿದ್ದಾರೆ. ಮಾಧ್ಯಮದವರೂ ಸಹ ವೀಡಿಯೋ ನೀಡಿದ್ದಾರೆ. ಅದನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳಿಸಲಾಗಿದ್ದು, ಅಲ್ಲಿಂದ ವರದಿ ಬಂದ ನಂತರದಲ್ಲಿ ಪ್ರಕರಣದ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದರು.‌

ಮೊದಲಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಸಿ.ಟಿ ರವಿ ವಿರುದ್ಧ ಅವಾಚ್ಯ ಪದ ಬಳಸಿದ ಕುರಿತು ದೂರು ದಾಖಲಿಸಿದ್ದರು. ಬಳಿಕ ಸಿ.ಟಿ ರವಿಯವರೂ ಸಹ ಪ್ರತಿ ದೂರು ನೀಡಿದ್ದಾರೆ. ಘಟನೆಗೆ ಸಂಬಂಧಿಸಿ ಈಗಾಗಲೇ ಸಮಿತಿಗೆ ಸತ್ಯಾಸತ್ಯತೆ ಪರಿಶೀಲನೆಗೆ ತಿಳಿಸಲಾಗಿದೆ. ಅಲ್ಲಿನ ವರದಿ ಆಧರಿಸಿ ಮುಂದಿನ ಕ್ರಮ ಆಗಲಿದೆ.

ಸಭಾಪತಿಗಳು ನ್ಯಾಯಾಧೀಶರ ಸ್ಥಾನದಲ್ಲಿ ಕುಳಿತುಕೊಂಡಂತೆ. ಅವರು ಪಕ್ಷಪಾತ ಮಾಡಬಾರದು. ಸಿ.ಟಿ ರವಿ ಹಾಗೂ ಲಕ್ಷ್ಮೀ ಹೆಬ್ಬಾಳ್ಕರ್ ಪ್ರಕರಣದಲ್ಲಿ ನಾನು ತೆಗೆದುಕೊಂಡ ನಿರ್ಧಾರವನ್ನು ಬಿಹಾರದ ಶಾಸಕಸಭೆಯಲ್ಲೂ ಶ್ಲಾಘಿಸಲಾಗಿದೆ. ನಿರ್ಧಾರವು ನೂರಕ್ಕೆ ನೂರರಷ್ಟು ಸರಿಯಿದೆ. ಯಾರೇ ನಿರ್ಧಾರ ತಪ್ಪು ಎಂದರೂ ಅದು ಅವರ ಅಭಿಪ್ರಾಯ ಎಂದು ಹೇಳಿದರು.

Leave a Reply

Your email address will not be published. Required fields are marked *