ವಾಷಿಂಗ್ಟನ್ : 2ನೇ ಅವಧಿಗೆ ಅಮೆರಿಕ ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಹಲವು ಕ್ರಾಂತಿಕಾರಕ ನಿರ್ಧಾರ ಗಳನ್ನು ಘೋಷಿಸಿರುವ ಡೊನಾಲ್ಡ್ ಟ್ರಂಪ್, ಇದೀಗ ಜನಸಾಮಾನ್ಯರಿಗೆ ವಿಧಿಸುವ ಆದಾಯ ತೆರಿಗೆಯನ್ನೇ ರದ್ದು ಮಾಡುವ ಸುಳಿವು ನೀಡಿದ್ದಾರೆ.
ಜನರಿಗೆ ತೆರಿಗೆ ಹೇರಿ ಆದಾಯ ಸಂಗ್ರಹಿಸುವ ಬದಲು, ವಿದೇಶಗಳ ಉತ್ಪನ್ನಗಳ ಮೇಲೆ ಹೆಚ್ಚಿನ ತೆರಿಗೆ ಹೇರಿ ಅದರ ಮೂಲಕ ಖಜಾನೆ ಭರ್ತಿ ಮಾಡುವ ಪ್ರಸ್ತಾಪವನ್ನು ಟ್ರಂಪ್ ಮುಂದಿಟ್ಟಿದ್ದಾರೆ. ಫ್ಲೋರಿಡಾದಲ್ಲಿ ನಡೆದ ರಿಪಬ್ಲಿಕನ್ ಪಕ್ಷದ ಸಮಾರಂಭವೊಂದರಲ್ಲಿ ಟ್ರಂಪ್ ಅವರು ಮಾತನಾಡಿದರು.
ಅಮೆರಿಕ ಶ್ರೀಮಂತ ಮತ್ತು ಶಕ್ತಿಯುತ ಇತಿಹಾಸಕ್ಕೆ ಮರಳುವ ಸಮಯ ಸಮೀಪದಲ್ಲಿದೆ. ಸುಂಕದ ವ್ಯವಸ್ಥೆ ಹಿಂದೆ ಅಮೆರಿಕವನ್ನು ಶ್ರೀಮಂತಗೊಳಿಸಿತ್ತು. ನಮ್ಮ ದೇಶದ ಜನರಿಗೆ ತೆರಿಗೆ ವಿಧಿಸಿ ಆದಾಯ ಸಂಗ್ರಹಿಸುವ ಬದಲು ನಾವು ವಿದೇಶಿ ರಾಷ್ಟ್ರಗಳಿಗೆ ಸುಂಕ ಮತ್ತು ತೆರಿಗೆ ವಿಧಿಸಬೇಕು ಎಂದಿದ್ದಾರೆ.
ಅಮೆರಿಕಕ್ಕೆ ತೊಂದರೆ ನೀಡುವ ಭಾರತ, ಚೀನಾ, ಬ್ರೆಜಿಲ್ ಮತ್ತಿತರ ದೇಶಗಳ ಮೇಲೆ ಹೆಚ್ಚಿನ ತೆರಿಗೆ ವಿಧಿಸುವುದಾಗಿ ಅಮೆರಿಕದ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಸಿದ್ದಾರೆ. ಈ ದೇಶಗಳು ಅಮೆರಿಕದ ಉತ್ಪನ್ನಗಳ ಮೇಲೆ ಹೆಚ್ಚಿನ ತೆರಿಗೆ ಹಾಕುತ್ತಿವೆ ಎಂದು ಟ್ರಂಪ್ ಆರೋಪಿಸಿದ್ದಾರೆ ಎನ್ನಲಾಗಿದೆ.