ಬೆಂಗಳೂರು : ಬಾಕಿ ವೇತನ ಬಿಡುಗಡೆಯೂ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಕರ್ನಾಟಕ ಹಾಲು ಮಹಾಮಂಡಳ (ಕೆಎಂಎಫ್) ನೌಕರರು ಆಗ್ರಹಿಸಿದ್ದಾರೆ. ಬೇಡಿಕೆಗಳನ್ನು ಈಡೇರಿಸದಿದ್ದರೆ ಫೆಬ್ರವರಿಯಿಂದ ಮುಷ್ಕರ ನಡೆಸುವುದಾಗಿ ಅವರು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ನೌಕರರ ಸಂಘವು ಈಗಾಗಲೇ ಆಡಳಿತ ಮಂಡಳಿಗೆ ಮನವಿ ಪತ್ರ ಸಲ್ಲಿಸಿದ್ದು, ತಮ್ಮ ಬೇಡಿಕೆಗಳನ್ನು ಈಡೇರಿಸಲು ಒಂದು ವಾರ ಕಾಲಾವಕಾಶ ನೀಡಿದೆ. ಇದು ಜನವರಿ 31ಕ್ಕೆ ಕೊನೆಗೊಳ್ಳಲಿದೆ. ಅಷ್ಟರೊಳಗೆ ಬೇಡಿಕೆಗಳು ಈಡೇರದಿದ್ದರೆ, ಮುಷ್ಕರ ನಡೆಸಲಾಗುವುದು ಎಂದು ನೌಕರರ ಸಂಘ ಎಚ್ಚರಿಕೆ ನೀಡಿದೆ.

7ನೇ ವೇತನ ಆಯೋಗದ ಶಿಫಾರಸಿನಂತೆ ಬಾಕಿ ಉಳಿದಿರುವ ವೇತನ ಶೀಘ್ರವೇ ಮಂಜೂರು ಮಾಡಬೇಕೆಂದು ಕೆಎಂಎಫ್ ನೌಕರರ ಸಂಘದ ಅಧ್ಯಕ್ಷ ಗೋವಿಂದಗೌಡ ಆಗ್ರಹಿಸಿದ್ದಾರೆ. 7ನೇ ವೇತನ ಆಯೋಗದ ಶಿಫಾರಸಿನ ಪ್ರಕಾರನ ಶೇ 25 ರ ವೇತನ ಹೆಚ್ಚಳಕ್ಕೆ ಸರ್ಕಾರ ಒಪ್ಪಿಗೆ ನೀಡಿತ್ತು. ಆದರೆ ಈ ಪೈಕಿ ಶೇ 17 ರಷ್ಟು ಮಾತ್ರ ಹೆಚ್ಚಳ ಮಾಡಿದೆ. ಶೇ 8 ರಷ್ಟು ವೇತನ ಹೆಚ್ಚಳ ಹಾಗೂ ಬಿಡುಗಡೆ ಬಾಕಿ ಇದೆ. ಅವುಗಳನ್ನು ಈಡೇರಿಸಬೇಕು ಎಂದು ಗೋವಿಂದಗೌಡ ಹೇಳಿದ್ದಾರೆ.

ಕೆಎಂಎಫ್‌ ರಾಜ್ಯಾದ್ಯಂತ ಸುಮಾರು 7,000 ಉದ್ಯೋಗಿಗಳನ್ನು ಒಳಗೊಂಡಿದೆ, ಅವರಲ್ಲಿ 1,400 ಉನ್ನತ ದರ್ಜೆಯ ಸಿಬ್ಬಂದಿ ಇದ್ದಾರೆ. ಸದ್ಯದ ಮಟ್ಟಿಗೆ, ವೇತನ ಬಾಕಿಯ ಮೊತ್ತದ ಬಿಡುಗಡೆ ಮಾಡಲು ಸರ್ಕಾರವು ಇನ್ನೂ ಅನುಮತಿ ನೀಡಿಲ್ಲ ಎಂದು ಆಡಳಿತ ಮಂಡಳಿ ಭಾವಿಸಿದೆ ಎಂದು ಕೆಎಂಎಫ್ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *