ಬೆಂಗಳೂರು : ಚಾಮರಾಜಪೇಟೆಯಲ್ಲಿ ಹಸು ಕೆಚ್ಚಲು ಕೊಯ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಹಸು ಮಾಲೀಕನ ಮನೆಗೆ ಬಿಜೆಪಿ ನಿಯೋಗ ಭೇಟಿ ನೀಡಿದೆ.

ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ, ವಿಪಕ್ಷ ನಾಯಕ ಆರ್.ಅಶೋಕ್, ಪಿಸಿ ಮೋಹನ್, ಭಾಸ್ಕರ್ ರಾವ್ ಭೇಟಿ ನೀಡಿದ್ದಾರೆ. ಈ ವೇಳೆ ಗೋಪೂಜೆ ಮಾಡಿ, ಗೋವಿಗೆ ಬಾಳೆಹಣ್ಣು, ಬೆಲ್ಲ ನೀಡಿದ್ದಾರೆ. ಜೊತೆಗೆ ಈ ವೇಳೆ ಆರ್.ಅಶೋಕ್ 1 ಲಕ್ಷ ಪರಿಹಾರ ನೀಡಿದ್ದಾರೆ.

ಭೇಟಿ ಬಳಿಕ ವಿಜಯೇಂದ್ರ ಮಾತನಾಡಿ, ನಾಡಿನ ಜನತೆಗೆ ಸಂಕ್ರಾಂತಿ ಶುಭಾಶಯ ಕೋರುತ್ತೇನೆ. ಮೊನ್ನೆ ದಿನ ಹಸು ಕೆಚ್ಚಲು ಕೊಯ್ದ ದುರ್ಘಟನೆ ನಡೆದಿತ್ತು. ಯಾವ ಪುಣ್ಯಭೂಮಿ ಮೇಲೆ ನಾವೆಲ್ಲ ಗೋ ಮಾತೆ ಪೂಜೆ ಮಾಡ್ತೀವಿ. ತಾಯಿ, ದೇವರ ಸಮಾನವಾಗಿ ಕಾಣ್ತೀವಿ. ಅಂತಹ ಗೋವಿಗೆ ಏನಾಗಿದೆ ಎಂದು ರಾಜ್ಯ, ದೇಶದ ಜನ ಗಮನಿಸಿದ್ದಾರೆ. ಇವತ್ತು ಹಸು ಮಾಲೀಕ ಕರ್ಣನಿಗೆ ಧೈರ್ಯ ಹೇಳಿದ್ದೇವೆ. ಗೋಮಾತೆ ಪೂಜೆ ಮಾಡುವ ದೇಶದಲ್ಲಿ ಹೀಗೆ ನಡೆದಿರೋದು ಅಕ್ಷಮ್ಯ. ಸಿದ್ದರಾಮಯ್ಯ ಸಿಎಂ ಆದ ಮೇಲೆ ಗೋರಕ್ಷಣೆ ಆಗ್ತಿಲ್ಲ.

ಈ ಘಟನೆ ಸಿದ್ದರಾಮಯ್ಯ, ಕಾಂಗ್ರೆಸ್‌ಗೆ ಒಳ್ಳೆಯದನ್ನು ಮಾಡಲ್ಲ. ಇವರ ಪಾಪದ ಕೊಡ ತುಂಬಿದೆ. ಯಾರೋ ಬಡಪಾಯಿನಾ ಅರೆಸ್ಟ್ ಮಾಡಿದ್ದಾರೆ. ಮಾಲೀಕ ಕರ್ಣನನ್ನ ಮೆಚ್ಚಬೇಕು ಧೈರ್ಯವಾಗಿ ಎದುರಿಸಿದ್ದಾನೆ. ಇದೀಗ ನಾವು ಧೈರ್ಯ ಹೇಳಿ ಗೋ ಪೂಜೆ ಮಾಡಿದ್ದೇವೆ ಎಂದರು.

ಇದೇ ವೇಳೆ ಆರ್.ಅಶೋಕ್ ಮಾತನಾಡಿ, ನಾನು ಘಟನೆ ಆದ ಕೂಡಲೇ ಸ್ಥಳಕ್ಕೆ ಬಂದಿದ್ದೆ. ರಕ್ತ ಹರಿಯುತ್ತಿತ್ತು. ಕೆಚ್ಚಲು ಕತ್ತರಿಸಿದ್ದು ನಾನು ನೋಡಿದೆ. ಪೊಲೀಸರು ಬಂಧನ ಮಾಡಿರುವವನು ಯಾವಾಗಲು ಬ್ಲೇಡ್ ಇಟ್ಟುಕೊಳ್ಳುತ್ತಿದ್ದ ಎಂದು ಹೇಳುತ್ತಾರೆ. ಮನುಷ್ಯತ್ವ ಇರೋರು ಹೀಗೆ ನಡೆದುಕೊಳ್ಳಲ್ಲ. ನನ್ನ ಜೀವನದಲ್ಲಿ ಇಂತಹ ಘಟನೆ ನೋಡಿಲ್ಲ. ಗೋವಿಗೆ ಪೂಜೆ ಮಾಡುವ ಹಬ್ಬ ಇವತ್ತು.

ಕಾಂಗ್ರೆಸ್ ಮುಖಂಡರು ನಿನ್ನೆ ಹಸು ತಗೋ ಎಂದು ಗಲಾಟೆ ಮಾಡಿದ್ದರಂತೆ. ಕಾಂಗ್ರೆಸ್ ಅವರು ಒಂದು ಕೈಯಲ್ಲಿ ಕೊಡೋದು ಮತ್ತೊಂದು ಕಡೆ ಕೊಲೆ ಮಾಡೋದು. ಗೋವಿನ ಶಾಪ ನಿಮಗೆ ತಟ್ಟುತ್ತದೆ. ಜಿಹಾದಿಗಳು ಈ ಕೆಲಸ ಮಾಡಿದ್ದಾರೆ. ಯಾರನ್ನೋ ಬಂಧನ ಮಾಡಿದ್ದಾರೆ. ಇದನ್ನು ನೋಡಿದರೆ ಪೊಲೀಸರು ಹಾಗೂ ಸರ್ಕಾರದ ಮೇಲೆ ಅನುಮಾನ ಬರುತ್ತಿದೆ ಎಂದು ಕಿಡಿಕಾರಿದರು.

Leave a Reply

Your email address will not be published. Required fields are marked *