ಗುವಾಹತಿ : ಅಸ್ಸಾಂನ ದಿಮಾ ಹಸಾವೊ ಜಿಲ್ಲೆಯ ಕಲ್ಲಿದ್ದಲು ಗಣಿಯಲ್ಲಿ ಸಂಭವಿಸಿದ ದುರಂತದಲ್ಲಿ ಈವರೆಗೂ 3 ಮೃತದೇಹಗಳನ್ನು ಪತ್ತೆ ಮಾಡಲಾಗಿದ್ದು, ಇನ್ನೂ ಒಂಬತ್ತು ಕಾರ್ಮಿಕರು ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ 30 ಸದಸ್ಯರ ತಂಡವು ಸ್ಥಳದಲ್ಲಿ ಬೀಡುಬಿಟ್ಟಿದ್ದು, ಎಂಟು ಸಿಬ್ಬಂದಿಯೊಂದಿಗೆ ರಾಜ್ಯ ವಿಪತ್ತು ನಿರ್ವಹಣಾ ಪಡೆಯ ಮತ್ತೊಂದು ತಂಡವನ್ನು ಸ್ಥಳಕ್ಕೆ ನಿಯೋಜಿಸಲಾಗಿದೆ.

ರಾತ್ರಿಯೇ ಸಿಕ್ಕಿಬಿದ್ದಿರುವ ಗಣಿಗಾರರ ಹೆಸರುಗಳನ್ನೂ ಸಿಎಂ ಕಚೇರಿ ಬಿಡುಗಡೆ ಮಾಡಿದ್ದು, ಸಂತ್ರಸ್ಥ ಕಾರ್ಮಿಕರನ್ನು ನೇಪಾಳದ ಗಂಗಾ ಬಹದ್ದೂರ್ ಶ್ರೇತ್ (38), ಪಶ್ಚಿಮ ಬಂಗಾಳದ ಸಂಜಿತ್ ಸರ್ಕಾರ್ (35), ಅಸ್ಸಾಂನ ಹುಸೇನ್ ಅಲಿ (30), ಜಾಕಿರ್ ಹುಸೇನ್ (38), ಸರ್ಪಾ ಬರ್ಮನ್ (46), ಮುಸ್ತಫಾ ಸೇಖ್ (44), ಖುಸಿ ಮೋಹನ್ ರೈ (57) , ಲಿಜನ್ ಮಗರ್ (26) ಮತ್ತು ಶರತ್ ಗೊಯಾರಿ (37) ಎಂದು ಗುರುತಿಸಲಾಗಿದೆ.

ಇನ್ನು ಕಲ್ಲಿದ್ದಲು ಗಣಿಯಲ್ಲಿ ಸಿಲುಕಿರುವವರ ರಕ್ಷಣೆಗೆ ಇದೇ ಸೇನೆ ಧುಮುಕಿದ್ದು, ‘ಸಿಕ್ಕಿಬಿದ್ದಿರುವ ಗಣಿಗಾರರನ್ನು ರಕ್ಷಿಸುವಲ್ಲಿ ನಾಗರಿಕ ಆಡಳಿತಕ್ಕೆ ಸಹಾಯ ಮಾಡಲು ಸೇನೆಯ ಪರಿಹಾರ ಅಂಕಣಗಳು ಉಮ್ರಾಂಗ್ಸೊ ತಲುಪಿವೆ ಎಂದು ಗುವಾಹಟಿ ಮೂಲದ ರಕ್ಷಣಾ ವಕ್ತಾರ ಲೆಫ್ಟಿನೆಂಟ್ ಕರ್ನಲ್ ಮಹೇಂದರ್ ರಾವತ್ ಹೇಳಿದ್ದಾರೆ.

ಇದೇ ವೇಳೆ ರಕ್ಷಣಾ ಕಾರ್ಯಾಚರಣೆಯಲ್ಲಿ ಸಹಾಯ ಮಾಡಲು ನೌಕಾಪಡೆಯ ಆಳವಾದ ಡೈವರ್‌ಗಳನ್ನು ಕೋರಲಾಗಿದೆ ಎಂದು ಸಿಎಂ ಹಿಮಂತ ಬಿಸ್ವಾ ಶರ್ಮಾ ಹೇಳಿದ್ದಾರೆ. “ಸ್ಥಳೀಯ ತಂಡದ ಮೌಲ್ಯಮಾಪನದ ಪ್ರಕಾರ ಗಣಿ ಒಳಗೆ ನೀರಿನ ಮಟ್ಟವು ಸುಮಾರು 100 ಅಡಿಗಳಿಗೆ ಏರಿದೆ. ಹೀಗಾಗಿ ವಿಶಾಖಪಟ್ಟಣಂ ಮುಳುಗು ತಜ್ಞರಿಗೆ ಬುಲಾವ್ ನೀಡಲಾಗಿದ್ದು, ಈಗಾಗಲೇ ಡೈವರ್ ಗಳು ವಿಶಾಖಪಟ್ಟಣಂನಿಂದ ವಿಮಾನದಲ್ಲಿ ಆಗಮಿಸುತ್ತಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.

ಕಲ್ಲಿದ್ದಲು ಗಣಿ ದುರಂತಗಳು ಈಶಾನ್ಯ ಭಾರತದಲ್ಲಿ ಸಾಮಾನ್ಯವಾಗಿದ್ದು, ಈ ಹಿಂದೆ ಜನವರಿ 2024 ರಲ್ಲಿ, ನಾಗಾಲ್ಯಾಂಡ್‌ನ ವೋಖಾ ಜಿಲ್ಲೆಯ ಕಲ್ಲಿದ್ದಲು ಗಣಿಯಲ್ಲಿ ಸಂಭವಿಸಿದ ಬೆಂಕಿಯಲ್ಲಿ ಆರು ಕಾರ್ಮಿಕರು ಸಾವನ್ನಪ್ಪಿ, ನಾಲ್ವರು ಗಾಯಗೊಂಡಿದ್ದರು. ಅಂತೆಯೇ ಮೇ ತಿಂಗಳಲ್ಲಿ, ಅಸ್ಸಾಂನ ತಿನ್ಸುಕಿಯಾ ಜಿಲ್ಲೆಯಲ್ಲಿ ಗಣಿ ಕುಸಿದು ಮೂವರು ಕಾರ್ಮಿಕರು ಸಾವನ್ನಪ್ಪಿರುವುದು ವರದಿಯಾಗಿದೆ.

Leave a Reply

Your email address will not be published. Required fields are marked *