ಲಕ್ನೋ : ಪಾಕಿಸ್ತಾನದ ಐಎಸ್‌ಐ ಜೊತೆ ಸಂಪರ್ಕ ಹೊಂದಿದ್ದ ಬಬ್ಬರ್ ಖಾಲ್ಸಾ ಇಂಟರ್‌ನ್ಯಾಷನಲ್‌ನ ಸಕ್ರಿಯ ಭಯೋತ್ಪಾದಕನನ್ನು ಉತ್ತರ ಪ್ರದೇಶ ಎಸ್‌ಟಿಎಫ್ ಮತ್ತು ಪಂಜಾಬ್ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಗುರುವಾರ ಮುಂಜಾನೆ ಕೌಶಂಬಿ ಜಿಲ್ಲೆಯಲ್ಲಿ ಬಂಧಿಸಿದ್ದಾರೆ.

ಪಂಜಾಬ್‌ನ ಅಮೃತಸರದ ರಾಮದಾಸ್ ಪ್ರದೇಶದ ಕುರ್ಲಿಯನ್ ಗ್ರಾಮದ ನಿವಾಸಿಯಾಗಿದ್ದ ಭಯೋತ್ಪಾದಕ ಲಾಜರ್ ಮಸಿಹ್‌ನನ್ನು ಕೌಶಂಬಿಯ ಕೊಖ್ರಾಜ್ ಪೊಲೀಸ್ ಠಾಣೆ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸಿ ಗುರುವಾರ ಬೆಳಗಿನ ಜಾವ 3:20ರ ಸುಮಾರಿಗೆ ಬಂಧಿಸಲಾಯಿತು ಎಂದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಅಮಿತಾಭ್ ಯಶ್ ತಿಳಿಸಿದ್ದಾರೆ.

ಬಂಧಿತ ಭಯೋತ್ಪಾದಕ ಬಬ್ಬರ್ ಖಾಲ್ಸಾ ಇಂಟರ್‌ನ್ಯಾಷನಲ್‌ನ ಜರ್ಮನಿ ಮೂಲದ ಮಾಡ್ಯೂಲ್ ಮುಖ್ಯಸ್ಥ ಸ್ವರ್ಣ್ ಸಿಂಗ್ ಅಲಿಯಾಸ್ ಜೀವನ್ ಫೌಜಿಗಾಗಿ ಕೆಲಸ ಮಾಡುತ್ತಿದ್ದ. ಅಲ್ಲದೇ ಪಾಕಿಸ್ತಾನ ಮೂಲದ ಐಎಸ್‌ಐ ಕಾರ್ಯಕರ್ತರೊಂದಿಗೆ ನೇರ ಸಂಪರ್ಕದಲ್ಲಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಂಧಿತ ಉಗ್ರ ಕೆಲವು ಸ್ಫೋಟಕ ವಸ್ತುಗಳು ಮತ್ತು ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳುವಲ್ಲಿ ಯುಪಿ ಎಸ್‌ಟಿಎಫ್ ಯಶಸ್ವಿಯಾಗಿದೆ. ವಶಪಡಿಸಿಕೊಂಡ ವಸ್ತುಗಳ ಪೈಕಿ ಮೂರು ಸಕ್ರಿಯ ಹ್ಯಾಂಡ್ ಗ್ರೆನೇಡ್, ಎರಡು ಸಕ್ರಿಯ ಡಿಟೋನೇಟರ್, ಒಂದು ವಿದೇಶಿ ನಿರ್ಮಿತ ಪಿಸ್ತೂಲ್ ಮತ್ತು ವಿದೇಶಿ ನಿರ್ಮಿತ 13 ಕಾರ್ಟ್ರಿಡ್ಜ್ಗಳು ಸೇರಿವೆ.

ಇದಲ್ಲದೆ, ಬಿಳಿ ಬಣ್ಣದ ಸ್ಫೋಟಕ ಪುಡಿ, ಗಾಜಿಯಾಬಾದ್ ವಿಳಾಸ ಹೊಂದಿರುವ ಆಧಾರ್ ಕಾರ್ಡ್, ಸಿಮ್ ಕಾರ್ಡ್ ಇಲ್ಲದ ಒಂದು ಮೊಬೈಲ್ ಫೋನ್ ಅನ್ನು ಸಹ ವಶಪಡಿಸಿಕೊಳ್ಳಲಾಗಿದೆ ಎಂದು ವರದಿಗಳು ತಿಳಿಸಿವೆ.

Leave a Reply

Your email address will not be published. Required fields are marked *