ಬೆಂಗಳೂರು : ಭ್ರಷ್ಟ ಅಧಿಕಾರಿಗಳಿಗೆ ಲೋಕಾಯುಕ್ತ ಬೆಳ್ಳಂಬೆಳಗ್ಗೆ ಶಾಕ್‌ ನೀಡಿದೆ. ಬೆಂಗಳೂರು ಸೇರಿದಂತೆ ರಾಜ್ಯದ ಅನೇಕ ಕಡೆಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಬೆಂಗಳೂರಿನ ಜಿಆರ್‌ಪಿಎ ಚೀಫ್‌ ಎಂಜಿನಿಯರ್ ನಂಜುಂಡಪ್ಪ ಮತ್ತು ಬಿಬಿಎಂಪಿ ಎಕ್ಸಿಕ್ಯೂಟಿವ್ ಎಂಜಿನಿಯರ್‌‌ ಹೆಚ್‌.ಪಿ ಕಲ್ಲೇಶಪ್ಪ ಅವರ ಮನೆಗಳ ಮೇಲೆ ದಾಳಿ ನಡೆದಿದೆ. ಕೋಲಾರದಲ್ಲಿ ಬೆಸ್ಕಾಂ AEE ಜಿ.ನಾಗರಾಜ್ ಮನೆ ಹಾಗೂ ಅವರಿಗೆ ಸೇರಿದ ಮೂರು ಸ್ಥಳಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.

ಇವರು ಬೆಂಗಳೂರಿನ ರಾಜಾಜಿನಗರದಲ್ಲಿ ಹಾಲಿ AEE ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರ ಸಂಬಂಧಿಕರೊಬ್ಬರ ಮನೆ ಮೇಲೂ ದಾಳಿ ನಡೆದಿದೆ. ದಾಳಿ ವೇಳೆ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿ ಪತ್ತೆಯಾಗಿದೆ. ನಾಗರಾಜ್ ಕೊಳ್ಳೇಗಾಲ ಬಳಿ 6 ಎಕರೆ ಜಮೀನು, ಬೆಂಗಳೂರಿನಲ್ಲಿ ಒಂದು ಮನೆ, ಎರಡು ನಿವೇಶನಗಳಿವೆ.

ದಾವಣಗೆರೆಯಲ್ಲಿ ಫುಡ್‌ ಸೇಫ್ಟಿ & ಕ್ವಾಲಿಟಿ ಯುನಿಟ್ ಹೆಲ್ತ್ ಡಿಪಾರ್ಟ್ಮೆಂಟ್‌ನ ಜಿಲ್ಲಾ ಆರೋಗ್ಯಾಧಿಕಾರಿ ಡಾ.ನಾಗರಾಜ್ ಮನೆ ಮೇಲೂ ದಾಳಿ ನಡೆದಿದೆ. ಲೋಕಾಯುಕ್ತ ಡಿವೈಎಸ್ಪಿ ಕಲಾವತಿ ನೇತೃತ್ವದಲ್ಲಿ ದಾಳಿ ಮಾಡಲಾಗಿದ್ದು, ನಾಗರಾಜ್ ನಿವಾಸದಲ್ಲಿ ಶೋಧ ನಡೆಸಲಾಗುತ್ತಿದೆ. ತುಮಕೂರಿನ ಸರ್ಕಾರಿ ಆಸ್ಪತ್ರೆ ವೈದ್ಯ ಡಾ. ಜಗದೀಶ್ ಮನೆ ಮೇಲೂ ‘ಲೋಕಾ’ ದಾಳಿ ನಡೆದಿದೆ.

ಬಾಗಲಕೋಟೆಯ ಬೀಳಗಿ ಲೋಕೋಪಯೋಗಿ ಇಲಾಖೆ ಎಫ್‌ಡಿಸಿ ಮಲ್ಲೇಶ್‌ ಮನೆ ಹಾಗೂ ಕಚೇರಿ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಕಲಬುರಗಿಯಲ್ಲಿ ಅಕ್ರಮ ಆಸ್ತಿ ಗಳಿಕೆ ಅರೋಪದ ಮೇಲೆ‌ ಲೋಕೋಪಯೋಗಿ ಚೀಫ್ ಇಂಜಿನಿಯರ್ ಮನೆ‌ ಮೇಲೆ ದಾಳಿ ನಡೆದಿದೆ. ಕಲಬುರಗಿಯ ಎನ್‌ಜಿಓ ಕಾಲೊನಿ ಮನೆ ಸೇರಿ ಒಟ್ಟು 6 ಕಡೆ ದಾಳಿಯಾಗಿದೆ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *