ಒಡಿಶಾ : ಕಾರಿಗೆ ಟ್ರಕ್ ಡಿಕ್ಕಿ ಹೊಡೆದು, ಕಾರಿನಲ್ಲಿದ್ದ ಇಬ್ಬರು ಬಿಜೆಪಿ ನಾಯಕರು ಸಾವಿಗೀಡಾಗಿರುವ ಘಟನೆ ಒಡಿಶಾದ ಸಂಬಲ್‌ಪುರ್ ಜಿಲ್ಲೆಯಲ್ಲಿ ನಡೆದಿದೆ. ಮೃತರನ್ನು ದೇಬೇಂದ್ರ ನಾಯಕ್ ಮತ್ತು ಮುರಳೀಧರ್ ಚುರಿಯಾ ಎಂದು ಗುರುತಿಸಲಾಗಿದೆ.
ನಾಯಕ್ ಬಿಜೆಪಿಯ ಗೋಶಾಲಾ ಮಂಡಲ ಅಧ್ಯಕ್ಷರಾಗಿದ್ದರೆ, ಚುರಿಯಾ ಮಾಜಿ ಸರಪಂಚ್ ಆಗಿದ್ದರು. ಇವರಿಬ್ಬರೂ ಬಿಜೆಪಿಯ ಹಿರಿಯ ನಾಯಕಿ ನೌರಿ ನಾಯ್ಕ್‌ಗೆ ಆಪ್ತರಾಗಿದ್ದರು. ಬುರ್ಲಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಕಾರಿನಲ್ಲಿ ಚಾಲಕ ಸೇರಿದಂತೆ ಆರು ಜನರಿದ್ದರು. ಭುವನೇಶ್ವರದಿಂದ ಕಾರ್ಡೋಲಾದಲ್ಲಿ ಮನೆಗೆ ಮರಳುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಎಲ್ಲಾ ಆರು ಜನರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ವೈದ್ಯರು ಘೋಷಿಸಿದರು. ಗಾಯಾಳುಗಳು ಅಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದಾರೆ.
ವಾಹನವು ನಮ್ಮ ಕಾರಿಗೆ ಎರಡು ಬಾರಿ ಹಿಂದಿನಿಂದ ಡಿಕ್ಕಿ ಹೊಡೆದಿದೆ. ಯಾರೋ ಉದ್ದೇಶಪೂರ್ವಕವಾಗಿ ನಮ್ಮ ವಾಹನವನ್ನು ಡಿಕ್ಕಿ ಹೊಡೆಯಲು ಪ್ರಯತ್ನಿಸುತ್ತಿದ್ದಾರೆ ಎಂದು ಶಂಕಿಸಿದ ಚಾಲಕ, ಕಾಂತಪಲ್ಲಿ ಚೌಕದ ಬಳಿ ಹೆದ್ದಾರಿಯಿಂದ ಗ್ರಾಮಾಂತರ ರಸ್ತೆಯ ಕಡೆಗೆ ಕಾರನ್ನು ತಿರುಗಿಸಿದನು. ಟ್ರಕ್ ಚಾಲಕ ನಮ್ಮ ವಾಹನವನ್ನು ಹಿಂಬಾಲಿಸಿದ. ಈ ವೇಳೆ ಕಾರು ಪಲ್ಟಿಯಾಯಿತು. ಹೆದ್ದಾರಿಯಲ್ಲಿ ನಮ್ಮ ಕಾರಿಗೆ ಟ್ರಕ್ ಚಾಲಕ ಮೂರನೇ ಬಾರಿ ಡಿಕ್ಕಿ ಹೊಡೆದಾಗ ನನಗೆ ಪ್ರಜ್ಞೆಯೇ ತಪ್ಪಿತು ಎಂದು ಅಪಘಾತದಲ್ಲಿ ಗಾಯಗೊಂಡ ಸುರೇಶ ಚಂದಾ ತಿಳಿಸಿದ್ದಾರೆ.
ಯಾರೋ ಉದ್ದೇಶಪೂರ್ವಕವಾಗಿ ಅಪಘಾತ ಮಾಡಿದ್ದಾರೆ ಎಂದು ನನಗೆ ಖಾತ್ರಿಯಿದೆ. ತಪ್ಪಾಗಿ ಒಮ್ಮೆ ವಾಹನಕ್ಕೆ ಡಿಕ್ಕಿ ಹೊಡೆಯಬಹುದು. ಯಾರದರು ಹಿಂದಿನಿಂದ ಮೂರು ಬಾರಿ ಡಿಕ್ಕಿ ಹೊಡೆಯುತ್ತಾರಾ ಎಂದು ಪ್ರಶ್ನಿಸಿದ್ದಾರೆ. ಗಾಯಾಳುಗಳನ್ನು ಭೇಟಿ ಮಾಡಿದ ನಂತರ ಮಾಜಿ ಶಾಸಕ ರೆಂಗಾಳಿ ನಾಯ್ಕ್ ಮಾತನಾಡಿ, ಇದು ಅಪಘಾತವಲ್ಲ, ಉದ್ದೇಶಪೂರ್ವಕ ಯಾರೋ ಪಿತೂರಿ ಮಾಡಿದ್ದಾರೆಂದು ಆರೋಪಿಸಿದ್ದಾರೆ ಎನ್ನಲಾಗಿದೆ.