ಕೊಪ್ಪಳ : ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಲ್ಲಿ ಒಂದಾದ ಪದ್ಮಶ್ರೀ ಪ್ರಶಸ್ತಿಗೆ ತೊಗಲುಗೊಂಬೆ ಆಟದ ಹಿರಿಯ ಕಲಾವಿದೆಯಾಗಿರುವ ಜಿಲ್ಲೆಯ ಮೋರನಾಳ ಗ್ರಾಮದ ಭೀಮವ್ವ ದೊಡ್ಡಬಳ್ಳಪ್ಪ ಶಿಳ್ಳೇಕ್ಯಾತ ಅವರಿಗೆ ಒಲಿದು ಬಂದಿದೆ. ಭೀಮವ್ವ ಅನಕ್ಷರಸ್ಥೆಯಾಗಿದ್ದರು ಬಾಲ್ಯದಿಂದಲೇ ತೊಗಲುಗೊಂಬೆಯಾಟ‌ ಕಲೆಯನ್ನು ಉಳಿಸಿ ಬೆಳೆಸುತ್ತಿದ್ದಾರೆ.

ಇಂದಿನ‌ ಆಧುನಿಕ ಯುಗದಲ್ಲಿ ಅನೇಕ‌ ಗ್ರಾಮೀಣ ಕ್ರೀಡೆಗಳು‌ ಮಾಯವಾಗುತ್ತಿವೆ. ಆಧುನಿಕ ಗಾಜೆಟ್​ಗಳಲ್ಲಿ ಬ್ಯೂಸಿಯಾಗಿರುವ ಇಂದಿನ‌ ಯುಗದ ಯುವಜನತೆಗೆ ಗ್ರಾಮೀಣ ಕ್ರೀಡೆಗಳ ಮಹತ್ವದ ಅರಿವು ಕಡಿಮೆ. ಆದರೆ ಕೊಪ್ಪಳ ತಾಲೂಕಿನ ಮೋರನಾಳ ಗ್ರಾಮದ ಶಿಳ್ಳೇಕ್ಯಾತ ಎಂಬ ಕುಟುಂಬಕ್ಕೆ ಕುಟುಂಬವೇ ಗ್ರಾಮೀಣ ಕಲೆಯಲ್ಲಿ ತೊಡಗಿಸಿಕೊಂಡಿದೆ. ಗ್ರಾಮೀಣ ಕಲೆ ತೊಗಲು ಗೊಂಬೆಯಾಟದ ಮೂಲಕ ಆ ಕುಟುಂಬ ಜನಮಾನಸದಲ್ಲಿ‌ ಉಳಿದುಕೊಂಡಿದೆ.

ಕೊಪ್ಪಳದ ಇರಕಲ್ಲಗಡಾದ ಹನುಮಟ್ಟಿಯ ಸಂಜೀವಪ್ಪ ಹೊಳೆಯಮ್ಮರ ಮಗಳಾದ ಭೀಮವ್ವ, ಕೊಪ್ಪಳ ತಾಲೂಕಿನ ಮೋರನಾಳ ಗ್ರಾಮದಲ್ಲಿ 1929 ರಲ್ಲಿ ಜನಿಸಿದ್ದರು. ತಮ್ಮ 14ನೇ ವಯಸ್ಸಿನಿಂದ ಇಲ್ಲಿಯವರೆಗೂ ತೊಗಲುಗೊಂಬೆಯಾಟವನ್ನ ಕುಲ ಕಸುಬಾಗಿ ಮಾಡುತ್ತಾ ಬಂದಿದ್ದಾರೆ. ಸದ್ಯ ಇದೇ ಕಲೆಯಲ್ಲಿ ಮಹತ್ತರ ಸಾಧನೆ ಕೂಡ ಮಾಡಿದ್ದಾರೆ. ಅಮೇರಿಕ, ಪ್ಯಾರಿಸ್, ಇಟಲಿ, ಇರಾನ್, ಇರಾಕ್, ಸ್ವಿಟ್ಜರ್ಲೆಂಡ್‌‌ ಮತ್ತು ಹಾಲೆಂಡ್ ಮುಂತಾದ ದೇಶಗಳಲ್ಲಿ ರಾಮಾಯಣ, ಮಹಾಭಾರತದಂತಹ ಮಹಾಕಾವ್ಯ ಹಾಗೂ ಪ್ರಸ್ತುತ ವಿದ್ಯಮಾನಗಳನ್ನು ತೊಗಲುಗೊಂಬೆಯಾಟದ ಮೂಲಕ ಪ್ರದರ್ಶನ ನೀಡಿ ನಾಡಿನ ಕಲೆ, ಸಂಸ್ಕೃತಿ, ಪರಂಪರೆಯನ್ನು ಎತ್ತಿಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಇವರ ಸಾಧನೆಯನ್ನ ಕಂಡು ಸರ್ಕಾರವು ಅನೇಕ ಪ್ರಶಸ್ತಿ ನೀಡಿ ಗೌರವಿಸಿದೆ. 1993ರಲ್ಲಿ ತೆಹರಾನ್ ದೇಶದ ಬೊಂಬೆ ಉತ್ಸವ ಪ್ರಶಸ್ತಿ, 63ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಪ್ರಶಸ್ತಿ, ಪ್ರಾದೇಶಿಕ ರಂಗ ಕಲೆಗಳ ಅಧ್ಯಯನ ಪ್ರಶಸ್ತಿ. 2005-06 ನೇ ಸಾಲಿನಲ್ಲಿ ಜಾನಪದ ಮತ್ತು ಬಯಲಾಟ ಅಕಾಡೆಮಿ ಪ್ರಶಸ್ತಿ, 2010 ರಲ್ಲಿ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, 2014ರಲ್ಲಿ ರಾಜ್ಯೋತ್ಸವ ಪ್ರಶಸ್ತಿ, 2020-21ನೇ ಸಾಲಿನ ಜಾನಪದ ಶ್ರೀ ಪ್ರಶಸ್ತಿ, 2022ರಲ್ಲಿ ಹಿರಿಯ ನಾಗರೀಕ ಪ್ರಶಸ್ತಿ ಹೀಗೆ ಸಂಘ ಸಂಸ್ಥೆಗಳಿಂದ ಅನೇಕ ಪ್ರಶಸ್ತಿ ಪುರಸ್ಕಾರಗಳು ಲಭಿಸಿವೆ.

ಭೀಮವ್ವ ಅವರು ವಿದೇಶದಲ್ಲಿ ತೊಗಲುಗೊಂಬೆಯಾಟ ಪ್ರದರ್ಶಿಸುವ ಮೂಲಕ ಮೆಚ್ಚುಗೆ ಗಳಿಸಿದರು. ಭೀಮವ್ವ ಈಗಲೂ ಇನ್ನೂರು ವರ್ಷದ ಹಳೆಯ ತೊಗಲುಗೊಂಬೆಗಳನ್ನು ಸಂರಕ್ಷಿಸಿದ್ದಾರೆ. ರಾಮಾಯಣ, ಮಹಾಭಾರತ ಕುರಿತ ಪ್ರಸಂಗಗಳನ್ನು ಭೀಮವ್ವ ನೆನಪಿನಿಂದ ಈಗಲೂ ಹಾಡುತ್ತಾರೆ. ಗೊಂಬೆಗಳ ಲಯಕ್ಕೆ ತಕ್ಕ ಹಾಗೆ ಹಾಡಿಕೆಯನ್ನು ಹೊಂದಿಸಬೇಕು. ಇದೊಂದು ಸೂಕ್ಷ್ಮವಾದ ಕಲೆ. ಇಂತಹ ಕಲೆಯ ಎಲ್ಲಾ ವಿಭಾಗಗಳಲ್ಲೂ ಭೀಮವ್ವನಿಗೆ ಪ್ರಾವಿಣ್ಯತೆಯಿದೆ.

‘ದೇಶ ವಿದೇಶಗಳಲ್ಲಿ ತೊಗಲುಗೊಂಬೆ ಪ್ರದರ್ಶಿಸಿದ ಮಹಾನ್ ಕಲಾವಿದೆ’ ಎನ್ನುವ ಶೀರ್ಷಿಕೆಯಲ್ಲಿ 103 ವರ್ಷದ ಹಿರಿಯಜ್ಜಿ ಭೀಮವ್ವನ ಬಗ್ಗೆ ಪರಿಚಯಿಸಿದ್ದರು. ಈಚೆಗೆ ಜಾನಪದ ಅಕಾಡೆಮಿ ಅಧ್ಯಕ್ಷೆಯಾದ ಮಂಜಮ್ಮ ಜೋಗತಿಯವರು 2020 ರ ‘ಜಾನಪದ ಶ್ರೀ’ ಪ್ರಶಸ್ತಿಗೆ ಭೀಮವ್ವನನ್ನು ಆಯ್ಕೆ ಮಾಡಿದ್ದು ಖುಷಿಕೊಟ್ಟಿತು ಎಂದು ಹೇಳಲಾಗಿದೆ.

Leave a Reply

Your email address will not be published. Required fields are marked *