ಪುಣೆ : ಕಾಲ್ ಸೆಂಟರ್‌ನಲ್ಲಿ ಕೆಲಸ ಮಾಡುತ್ತಿದ್ದ, ಯುವತಿಯ ಮೇಲೆ ಆಕೆಯ ಸಹೋದ್ಯೋಗಿ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ. ಈ ವೇಳೆ ಗಂಭೀರವಾಗಿ ಗಾಯಗೊಂಡಿದ್ದ ಯುವತಿಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾಳೆ.

ಹಣಕಾಸಿನ ವಿವಾದದ ಹಿನ್ನೆಲೆಯಲ್ಲಿ ಆರೋಪಿ ಯುವತಿಯ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಮೃತ ಯುವತಿಯನ್ನು 28 ವರ್ಷದ ಶುಭದಾ ಶಂಕರ್ ಕೊಡಾರೆ ಎಂದು ಗುರುತಿಸಲಾಗಿದೆ.

ಶುಭದಾ ಪುಣೆ-ಸತಾರಾ ರಸ್ತೆಯ ಬಾಲಾಜಿನಗರ ಪ್ರದೇಶದಲ್ಲಿ ವಾಸವಾಗಿದ್ದು ಯೆರವಾಡಾದ ಪ್ರಸಿದ್ಧ ಕಾಲ್ ಸೆಂಟರ್‌ನಲ್ಲಿ ಕೆಲಸ ಮಾಡುತ್ತಿದ್ದಳು. ಕೊಲೆ ಪ್ರಕರಣ ಸಂಬಂಧ ಯೆರವಾಡ ಪೊಲೀಸರು 30 ವರ್ಷದ ಕೃಷ್ಣ ಸತ್ಯನಾರಾಯಣ್ ಕನೋಜ್ ಬಂಧಿಸಿದ್ದಾರೆ. ಆತನ ವಿರುದ್ಧ ಯೆರವಾಡ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸರ ಪ್ರಕಾರ, ಯುವತಿ ಮೂಲತಃ ಸತಾರ್‌ನವಳು. ಆರೋಪಿ ಕೃಷ್ಣ ಮತ್ತು ಯುವತಿ ಒಂದೇ ಕಾಲ್ ಸೆಂಟರ್‌ನಲ್ಲಿ ಕೆಲಸ ಮಾಡುತ್ತಿದ್ದರು. ನಿನ್ನೆ ಸಂಜೆ, ಯುವತಿ ತನ್ನ ಕೆಲಸ ಮುಗಿಸಿ ಪಾರ್ಕಿಂಗ್ ಸ್ಥಳಕ್ಕೆ ಬಂದಿದ್ದಳು. ಆ ಸಮಯದಲ್ಲಿ ಅಲ್ಲಿ ಕಾಯುತ್ತಿದ್ದ, ಕೃಷ್ಣ ಆ ಯುವತಿಯೊಂದಿಗೆ ಜಗಳವಾಡಲು ಪ್ರಾರಂಭಿಸಿದನು. ನಂತರ ಆಕೆಯ ಮೇಲೆ ಹರಿತವಾದ ಆಯುಧದಿಂದ ಹಲ್ಲೆ ಮಾಡಿದ್ದನು. ಯುವತಿಯ ಕಿರುಚಾಟ ಕೇಳಿ ಕಂಪನಿ ನೌಕರರು ಮತ್ತು ಭದ್ರತಾ ಸಿಬ್ಬಂದಿ ಅಲ್ಲಿಗೆ ಬಂದರು. ಇನ್ನು ಹಲ್ಲೆ ಮಾಡಿದ್ದ ಕೃಷ್ಣ ಚಾಕುವನ್ನು ದೂರಕ್ಕೆ ಎಸೆದ ನಂತರ ಅಲ್ಲಿ ನೆರೆದಿದ್ದವರು ಆತನಿಗೆ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.

ಪ್ರಾಥಮಿಕ ತನಿಖೆಯಲ್ಲಿ ಆರೋಪಿಯು ಹಣಕಾಸಿನ ವಿವಾದದ ಹಿನ್ನೆಲೆಯಲ್ಲಿ ಯುವತಿಯ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ತಿಳಿದುಬಂದಿದೆ. ಆದರೆ, ದಾಳಿಯ ಹಿಂದಿನ ನಿಜವಾದ ಕಾರಣವನ್ನು ಕಂಡುಹಿಡಿಯಲು ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಮನೋಜ್ ಪಾಟೀಲ್ ತಿಳಿಸಿದ್ದಾರೆ.

Leave a Reply

Your email address will not be published. Required fields are marked *