ದುಬೈನಿಂದ ಕೋಟಿ, ಕೋಟಿ ಬೆಲೆ ಬಾಳುವ ಚಿನ್ನ ಕಳ್ಳ ಸಾಗಾಟದ ಆರೋಪದಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ಏರ್‌ಪೋರ್ಟ್‌ನಲ್ಲಿ ನಟಿ ರನ್ಯಾ ರಾವ್ ಅವರನ್ನು ಬಂಧಿಸಲಾಗಿದೆ.
ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿರುವ ರನ್ಯಾ ರಾವ್ ಅವರು ಜೈಲಿನಿಂದ ಡಿಆರ್‌ಐ ಎಡಿಜಿಗೆ ಸುದೀರ್ಘ ಪತ್ರ ಬರೆದಿದ್ದಾರೆ. ಆರೋಪಿ ರನ್ಯಾ ರಾವ್ ಕಂದಾಯ ಗುಪ್ತಚರ ನಿರ್ದೇಶನಾಲಯ ಎಡಿಜಿಪಿಗೆ ಪತ್ರ ಬರೆದಿದ್ದಾರೆ. ಅದರಲ್ಲಿ ಪ್ರಮುಖವಾಗಿ 7 ಅಂಶಗಳ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ.
ಮಾರ್ಚ್ 3-4 ರ ಗೋಲ್ಡ್ ಸ್ಮಗ್ಲಿಂಗ್ ಪ್ರಕರಣದಲ್ಲಿ ನನ್ನ ಮೇಲೆ ಸುಳ್ಳು ಕೇಸ್ ದಾಖಲು ಮಾಡಿದ್ದಾರೆ. 14 ಕೆಜಿ ಚಿನ್ನ ತಂದಿರೋದಾಗಿ ಸುಳ್ಳು ಕೇಸ್ ದಾಖಲು ಮಾಡಿದ್ದಾರೆ. ಅಧಿಕಾರಿಗಳು ನನಗೆ ಮಾತನಾಡೋದಕ್ಕೆ ಯಾವುದೇ ಅವಕಾಶ ಕೊಟ್ಟಿಲ್ಲ. 10 ರಿಂದ 15 ಬಾರಿ ನನ್ನ ಮೇಲೆ ಅಧಿಕಾರಿಗಳು ಕೈ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ಈ ಪ್ರಕರಣದಲ್ಲಿ ನಾನು ಅಮಾಯಕಿ. ಅಧಿಕಾರಿಗಳು ನನಗೆ ಹೊಡೆದಿರೋದಕ್ಕೆ ಕಾರಣ ನೀಡಿಲ್ಲ. ನನಗೆ ಹೊಡೆದ ಅಧಿಕಾರಿಗಳನ್ನು ನಾನು ಗುರುತಿಸಬಲ್ಲೆ. ನನಗೆ ಹೊಡೆದು ಸ್ಟೇಟ್‌ಮೆಂಟ್‌ಗೆ ಸಹಿ ಮಾಡಿಸಿಕೊಂಡಿದ್ದಾರೆ. ಸಹಿ ಮಾಡಲಿಲ್ಲ ಅಂದ್ರೆ ನನ್ನ ತಂದೆ ಹೆಸರು ಜೊತೆಗೆ ಎಕ್ಸ್‌ಪೋಸ್ ಮಾಡ್ತೀವಿ ಎಂದು ನನಗೆ ಮಾನಸಿಕವಾಗಿ ದೈಹಿಕವಾಗಿ ಹಿಂಸೆ ಕೊಟ್ಟಿದ್ದಾರೆ ಎಂದು ರನ್ಯಾ ರಾವ್ ಉಲ್ಲೇಖಿಸಿದ್ದಾರೆ.
10-15 ಬಾರಿ ನನ್ನ ಮುಖಕ್ಕೆ ಬಾರಿಸಿರುವ ಅಧಿಕಾರಿಗಳು 40 ಖಾಲಿ ಪೇಪರ್ ಮೇಲೆ ಸಹಿ ಮಾಡಿಸಿಕೊಂಡಿದ್ದಾರೆ. ಟೈಪ್ ಮಾಡಿದ ಕೆಲವೊಂದಿಷ್ಟು ದಾಖಲೆಗಳ ಮೇಲೂ ಸಹಿ ಮಾಡಿಸ್ಕೊಂಡಿದ್ದಾರೆ. ಕೋರ್ಟ್‌ಗೆ ಹಾಜರು ಪಡಿಸುವ ಮುನ್ನ ನನಗೆ ನಿದ್ದೆ ಮಾಡಲು ಬಿಟ್ಟಿಲ್ಲ. ಸರಿಯಾಗಿ ಊಟ ಕೊಟ್ಟಿಲ್ಲ. ಈ ಪ್ರಕರಣದಲ್ಲಿ ನನ್ನದು ಏನು ತಪ್ಪಿಲ್ಲ. ಬೇಕಂತ ನನ್ನ ಆರೋಪಿ ಮಾಡಿದ್ದಾರೆ ಎಂದು ರನ್ಯಾ ರಾವ್ ತಾನು ಬರೆದ ಪತ್ರದಲ್ಲಿ ಆರೋಪಿಸಿದ್ದಾರೆ.