ಬೆಂಗಳೂರು : ಏಷ್ಯಾದ ಅತಿ ದೊಡ್ಡ ವೈಮಾನಿಕ ಪ್ರದರ್ಶನ ಏರೋ ಇಂಡಿಯಾ ಉದ್ಯಾನನಗರಿ ಸಜ್ಜಾಗಿದ್ದು, ಈ ನಡುವಲ್ಲೇ ಮಾಂಸ ಮಾರಾಟಕ್ಕೆ ಹೇರಲಾಗಿದ್ದ ನಿಷೇಧವನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಹಿಂಪಡೆದಿದೆ.
ಹೋಟೆಲ್ ಮಾಲೀಕರಿಂದ ತೀವ್ರ ಆಕ್ಷೇಪ ವ್ಯಕ್ತವಾದ ಹಿನ್ನೆಲೆಯಲ್ಲಿ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಆದೇಶವನ್ನು ಹಿಂಪಡೆದಿದ್ದಾರೆಂದು ಬೆಂಗಳೂರು ಹೊಟೇಲ್ ಅಸೋಸಿಯೇಷನ್ ತಿಳಿಸಿದೆ. ಆದರೆ, ಬಿಬಿಎಂಪಿ ಯಾವುದೇ ಅಧಿಕೃತ ಮಾಹಿತಿಯನ್ನು ನೀಡಿಲ್ಲ ಎನ್ನಲಾಗಿದೆ.
ಫೆಬ್ರವರಿ 10 ರಿಂದ 14 ರವರೆಗೆ ಯಲಹಂಕ ವಾಯುನೆಲೆಯಲ್ಲಿ ಏರ್ ಶೋ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಪಕ್ಷಿಗಳ ದಾಳಿಗಳನ್ನು ತಡೆಗಟ್ಟಲು ಸುತ್ತಮುತ್ತಲಿನ ಪ್ರದೇಶಗಳಲ್ಲ ಮಾಂಸ ಮಾರಾಟವನ್ನು ಬಿಬಿಎಂಪಿ ನಿಷೇಧಿಸಲಾಗಿದೆ.
ಯಲಹಂಕ ಏರ್ ಪೋರ್ಸ್ ಸ್ಟೇಷನ್‌ನಲ್ಲಿ ದಿನಾಂಕ 10 ರಿಂದ 14 ರವರೆಗೆ ಅಂತರಾಷ್ಟ್ರೀಯ ಏರ್‌ಶೋ ನಡೆಯುವುದರಿಂದ ಏರ್ ಶೋ ಸುಗಮವಾಗಿ ನಡೆಸಲು ಯಲಹಂಕ ವಲಯದ ಏರ್‌ಪೋರ್ಸ್ ಸ್ಟೇಷನಿಂದ 13 ಕಿ. ಮೀ. ವ್ಯಾಪ್ತಿಯಲ್ಲಿ ಬರುವ ಎಲ್ಲಾ ಮಾಂಸ ಮಾರಾಟದ ಉದ್ದಿಮೆಗಳನ್ನು ಮುಚ್ಚುವುದು ಹಾಗೂ ಹೋಟೆಲ್ ಮತ್ತು ಡಾಬಾಗಳಲ್ಲಿ ಮಾಂಸಾಹಾರ ತಯಾರಿಕೆ ಮತ್ತು ಮಾರಾಟವನ್ನು ನಿಷೇಧಿಸಲಾಗಿದೆ. ನಿಯಮ ಉಲ್ಲಂಘಿಸಿದಲ್ಲಿ ಬಿಬಿಎಂಪಿ ಕಾಯ್ದೆ 2020 ಮತ್ತು ಏರ್ ಕ್ರಾಫ್ಟ್ ರೂಲ್ಸ್ 1937ರ ರೂಲ್ 91 ರಂತೆ ಮತ್ತು ಇತರ ಕಾನೂನು ರೀತ್ಯಾ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿತ್ತು.
ಬಿಬಿಎಂಪಿಯ ಈ ಆದೇಶದ ವಿರುದ್ಧ ಹೋಟೆಲ್ ಮಾಲೀಕರು ತೀವ್ರ ಆಕ್ಷೇಪ ಎತ್ತಿದ್ದಾರೆ. ಏರೋ ಇಂಡಿಯಾ ವೇಳೆ ಮಾಂಸಾಹಾರ ನಿಷೇಧ ನಿರ್ಧಾರ ಸಮಂಜಸವಲ್ಲ. ಫೆಬ್ರವರಿ 10 ರಿಂದ 14ರವರೆಗೆ ಏರ್‌ಶೋ 2025 ಪ್ರದರ್ಶನ ನಡೆಯಲಿದ್ದು, ಜನವರಿ 23 ರಿಂದ ಫೆಬ್ರವರಿ 17ರವರೆಗೆ ಒಟ್ಟು 26 ದಿನಗಳ ಕಾಲ ಮಾಂಸಹಾರ ಸ್ಥಗಿತಗೊಳಿಸುವ ಬಗ್ಗೆ ತೀರ್ಮಾನ ತೆಗೆದುಕೊಂಡಿರುವುದು ಸಂಪೂರ್ಣ ಅವೈಜ್ಞಾನಿಕವಾಗಿದೆ.
ಈ ಪ್ರದೇಶದಲ್ಲಿ ಸುಮಾರು 5000ಕ್ಕಿಂತಲೂ ಹೆಚ್ಚು ಸ್ಟಾರ್ ಹೊಟೇಲ್‌ಗಳು, ಪಬ್, ಬಾರ್ & ರೆಸ್ಟೋರೆಂಟ್‌ಗಳು, ಮಧ್ಯಮ ವರ್ಗ, ಇವೆಲ್ಲವುಗಳ ವ್ಯಾಪಾರ ಸಂಪೂರ್ಣ ಸ್ಥಗಿತಗೊಳಿಸಿದರೆ ಹೆಚ್ಚಿನ ತೊಂದರೆಯುಂಟಾಗಲಿದೆ ಎಂದು ಸಂಘ ತಿಳಿಸಿದೆ.
ಈ ಕುರಿತು ಬಿಬಿಎಂಪಿ ಬಳಿ ಮನವಿ ಸಲ್ಲಿಸಲಾಗಿದ್ದು, ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಆದೇಶವನ್ನು ಹಿಂಪಡೆದಿದ್ದಾರೆಂದು ಬೆಂಗಳೂರು ಹೊಟೇಲ್ ಅಸೋಸಿಯೇಷನ್ ಅಧ್ಯಕ್ಷ ಪಿ.ಸಿ.ರಾವ್ ಅವರು ತಿಳಿಸಿದ್ದಾರೆ.