ಮಂಡ್ಯ : ವಂಚನೆ ಪ್ರಕರಣದಲ್ಲಿ ಜೈಲು ಸೇರಿದ್ದ ಐಶ್ವರ್ಯಗೌಡ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮಂಡ್ಯ ಜಿಲ್ಲೆಯ ಮಳವಳ್ಳಿಯ ಶಾಸಕ ನರೇಂದ್ರಸ್ವಾಮಿ ಅವರಿಗೆ ಹಣ ನೀಡಿದ್ದಾರೆ ಎಂದು ಮಾಜಿ ಶಾಸಕ ಅನ್ನದಾನಿ ಗಂಭೀರ ಆರೋಪ ಮಾಡಿದ್ದಾರೆ.
ಈ ಕುರಿತು ಮಾತನಾಡಿರುವ ಅವರು, ಐಶ್ವರ್ಯಗೌಡ ಮೂಲತಃ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಕಿರುಗಾವಲು ಗ್ರಾಮದವರು. ಈಕೆ ಮಂಡ್ಯ ಜಿಲ್ಲೆಯಲ್ಲೂ ಹಲವರಿಗೆ ಕೋಟ್ಯಂತರ ರೂಪಾಯಿ ವಂಚನೆ ಮಾಡಿದ್ದಾರೆ. ಅಮಾಯಕರನ್ನ ನಂಬಿಸಿ ಅವರಿಗೆ ಮೋಸ ಮಾಡಿದ್ದಾರೆ. ಈಕೆಯ ಈ ಮೋಸದ ಜಾಲಕ್ಕೆ ಕಾಂಗ್ರೆಸ್‌ನ ಒಂದಷ್ಟು ಮುಖಂಡರು ಬೆನ್ನೆಲುಬಾಗಿ ನಿಂತಿದ್ದಾರೆ ಎಂದು ದೂರಿದ್ದಾರೆ.
ಈ ಹಿಂದೆ ಸಾಕಷ್ಟು ಜನ ಐಶ್ವರ್ಯಗೌಡ ವಿರುದ್ಧ ವಂಚನೆಯ ಸಂಬಂಧ ದೂರು ನೀಡಲು ಪೊಲೀಸ್ ಠಾಣೆಗೆ ಹೋಗಿದ್ದರು. ಆದ್ರೆ ಪೊಲೀಸರು ದೂರನ್ನು ಸ್ವೀಕಾರ ಮಾಡಿಯೇ ಇಲ್ಲ. ಇದಕ್ಕೆ ಐಶ್ವರ್ಯಗೌಡ ಹಿಂದಿರುವ ಕಾಂಗ್ರೆಸ್ ನಾಯಕರು ಕಾರಣ ಎಂದಿದ್ದಾರೆ.
ಮಳವಳ್ಳಿ ಶಾಸಕರಾಗಿರುವ ನರೇಂದ್ರಸ್ವಾಮಿಗೆ ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಐಶ್ವರ್ಯಗೌಡ ಫಂಡಿಂಗ್ ಮಾಡಿದ್ದಾರೆ. ಐಶ್ವರ್ಯಗೌಡರನ್ನ ಮಂಪರು ಪರೀಕ್ಷೆಗೆ ಒಳಪಡಿಸಿದರೆ, ಎಲ್ಲಾ ವಿಚಾರಗಳು ಬೆಳಕಿಗೆ ಬರುತ್ತವೆ. ಐಶ್ವರ್ಯಗೌಡರ ವಂಚನೆ ಪ್ರಕರಣವನ್ನ ಸಿಬಿಐಗೆ ನೀಡಬೇಕೆಂದು ಮಾಜಿ ಶಾಸಕ ಅನ್ನದಾನಿ ಆಗ್ರಹಿಸಿದ್ದಾರೆ ಎನ್ನಲಾಗಿದೆ.