ಚಿಕ್ಕಮಗಳೂರು : ರಾಜ್ಯದಲ್ಲಿ ಇತ್ತೀಚೆಗೆ ಶರಣಾದ ನಕ್ಸಲರು ರಹಸ್ಯ ಸ್ಥಳದಲ್ಲಿ ಅಡಗಿಸಿಟ್ಟಿದ್ದರು ಎನ್ನಲಾದ ಶಸ್ತ್ರಾಸ್ತ್ರಗಳು ಪತ್ತೆಯಾಗಿವೆ.
ಚಿಕ್ಕಮಗಳೂರು ಜಿಲ್ಲೆ, ಕೊಪ್ಪ ತಾಲೂಕಿನ ಜಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಕಿತ್ತಲೆಗಂಡಿ ಕಾಡಿನಲ್ಲಿ ಪತ್ತೆಯಾಗಿದೆ. ಮೇಲ್ನೋಟಕ್ಕೆ ನಕ್ಸಲರದ್ದೇ ಎಂದು ಹೇಳಲಾಗುತ್ತಿದ್ದರೂ, ಇನ್ನೂ ಖಚಿತವಾಗಿಲ್ಲ. ತನಿಖೆಯಿಂದ ಗೊತ್ತಾಗಬೇಕು ಎಂದು ಪೊಲೀಸರು ತಿಳಿಸಿದ್ದಾರೆ.
1 ಎಕೆ-47, 303 ಕೋವಿ 5, ಒಂದು ಪಿಸ್ತೂಲ್, 100ಕ್ಕೂ ಹೆಚ್ಚು ಗುಂಡುಗಳು ಮೇಗೂರು ಅರಣ್ಯ ವ್ಯಾಪ್ತಿಯ ಕಿತ್ತಲೆಗಂಡಿ ಅರಣ್ಯ ಪ್ರದೇಶದಲ್ಲಿ ಪತ್ತೆಯಾಗಿವೆ. ಶಸ್ತ್ರಾಸ್ತ್ರ ಕಾಯ್ದೆ ಅಡಿಯಲ್ಲಿ ಅಪರಿಚಿತರ ಆಯುಧಗಳು ಎಂದು ಜಯಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪೊಲೀಸರು 6 ಮಂದಿ ನಕ್ಸಲರನ್ನು ರಾಷ್ಟ್ರೀಯ ತನಿಖಾ ದಳದ ವಿಶೇಷ ನ್ಯಾಯಾಲಯಕ್ಕೆ ಹಾಜರು ಪಡಿಸುವ ಮೊದಲು ಶಸ್ತ್ರಾಸ್ತ್ರಗಳ ಬಗ್ಗೆ ಮಾಹಿತಿಯನ್ನು ಪಡೆದುಕೊಂಡಿದ್ದರು. ಕೆಲವರು ಅರಣ್ಯದ ರಹಸ್ಯ ಸ್ಥಳದಲ್ಲಿ ಅಡಗಿಸಿ ಇಟ್ಟಿರುವುದಾಗಿ ತಿಳಿದುಬಂದಿತ್ತು. ಪೊಲೀಸರು ಬಾಡಿ ವಾರಂಟ್ ಪಡೆದು ನಕ್ಸಲರನ್ನುಹೆಚ್ಚಿನ ವಿಚಾರಣೆಗೆ ಒಳಪಡಿಸಿದ ಬಳಿಕ ಶಸ್ತ್ರಾಸ್ತ್ರ ವಶಕ್ಕೆ ಪಡೆಯಲಿದ್ದಾರೆ ಎಂದು ತಿಳಿದು ಬಂದಿದೆ.