ಲಖನೌ : ವಿದ್ಯುನ್ಮಾನ ಮತಯಂತ್ರಗಳು ನಂಬಿಕೆ ಅರ್ಹವಾಗಿಲ್ಲ ಎಂದು ಹೇಳಿರುವ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್, ಮತಪತ್ರಗಳ ಮೂಲಕ ಚುನಾವಣೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.
ಜರ್ಮನಿಯಲ್ಲಿರುವ ಭಾರತೀಯ ಮೂಲದ ಸಂಸತ್ ಸದಸ್ಯ ರಾಹುಲ್ ಕುಮಾರ್ ಕಾಂಬೋಜ್ ಅವರೊಂದಿಗೆ ಎಸ್‌ಪಿ ಕೇಂದ್ರ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಸಿಎಂ ಅಖಿಲೇಶ್ ಯಾದವ್, ಜರ್ಮನಿಯಂತಹ ದೇಶ ಕೂಡ ಬ್ಯಾಲೆಟ್ ಪೇಪರ್ ಬಳಸಿ ಚುನಾವಣೆ ನಡೆಸುತ್ತದೆ. ಆದರೆ ಭಾರತದಲ್ಲಿ, ಪಟ್ಟಭದ್ರ ಹಿತಾಸಕ್ತಿಗಳನ್ನು ಪೂರೈಸಲು ಇವಿಎಂಗಳ ಮೂಲಕ ಚುನಾವಣೆಗಳನ್ನು ನಡೆಸಲಾಗುತ್ತಿದೆ ಎಂದು ಆರೋಪಿಸಿದರು.
ಇವಿಎಂಗಳನ್ನು ಯಾರೂ ನಂಬುವುದಿಲ್ಲ, ಚುನಾವಣೆಯಲ್ಲಿ ಗೆದ್ದವರ ಮುಖವೂ ಸಹ ವ್ಯವಸ್ಥೆಯ ಮೇಲೆ ನಂಬಿಕೆಯಿಲ್ಲದ ಕಾರಣ ನಿರಾಶೆಗೊಂಡಂತಿರುತ್ತದೆ ಎಂದು ಹೇಳುವ ಮೂಲಕ ಆತ್ಮವಿಶ್ವಾಸ ತುಂಬುವ ಚುನಾವಣೆಯ ಅಗತ್ಯವನ್ನು ಒತ್ತಿ ಹೇಳಿದರು.
ಜರ್ಮನಿಯ ಬ್ಯಾಲೆಟ್ ಪೇಪರ್ ಮತದಾನ ವ್ಯವಸ್ಥೆಯ ಪ್ರಯೋಜನ ಕುರಿತು ಮಾತನಾಡಿದ ಕಾಂಬೋಜ್, ಜರ್ಮನಿಯಲ್ಲಿ ಈಗಲೂ ಬ್ಯಾಲೆಟ್ ಪೇಪರ್ ಬಳಸಿ ಚುನಾವಣೆ ನಡೆಸಲಾಗುತ್ತದೆ. ಯಾವುದೇ ವ್ಯತ್ಯಾಸಗಳನ್ನು ಮರುಎಣಿಕೆಯ ಮೂಲಕ ಪರಿಹರಿಸಬಹುದಾಗಿದ್ದು, ಇದೊಂದು ಪ್ರಮುಖ ವ್ಯವಸ್ಥೆಯಾಗಿದೆ.
ಲಖನೌ ಭೇಟಿ ಮತ್ತು ಯಾದವ್ ಅವರೊಂದಿಗಿನ ದೀರ್ಘಕಾಲದ ಸಂಬಂಧ ಕುರಿತು ಮಾತನಾಡಿದ ಕಾಂಬೋಜ್, ಭಾರತೀಯ ಮೂಲದ ವ್ಯಕ್ತಿಗಳು ಮತ್ತು ಜರ್ಮನಿಯ ನಡುವೆ ಸಹಯೋಗವನ್ನು ಬೆಳೆಸುವಲ್ಲಿ ನನ್ನ ಪ್ರಯತ್ನಗಳು ಕೇಂದ್ರೀಕೃತವಾಗಿವೆ ಎಂದು ಹೇಳಿದರು.