ಕೊಪ್ಪಳ : ಕೊಪ್ಪಳದ ಗವಿಮಠದ ಹೆಸರನ್ನು ಬಳಕೆ ಮಾಡೊದು ಹಾಗೂ ಮತ್ತೊಬ್ಬ ಸ್ವಾಮೀಜಿ, ಮಠಕ್ಕೆ ತಮ್ಮನ್ನು ಹೋಲಿಕೆ ಮಾಡದಂತೆ ಭಕ್ತರಲ್ಲಿ ಮನವಿ ಮಾಡಿದ ಕೊಪ್ಪಳ ಗವಿಮಠದ ಅಭಿನವ ಗವಿಶ್ರೀಗಳು ವೇದಿಕೆಯಲ್ಲಿ ಭಾವುಕರಾಗಿ ಕಣ್ಣೀರಿಟ್ಟಿದ್ದಾರೆ.
ಕೊಪ್ಪಳದ ಗವಿಮಠದಲ್ಲಿ ರಾತ್ರಿ ನಡದ ಕಾರ್ಯಕ್ರಮದಲ್ಲಿ ಹಮ್ಮಿಕೊಂಡಿದ್ದ, ಜಾತ್ರೋತ್ಸವ ಸಮಾರೋಪ ಸಮಾರಂಭದಲ್ಲಿ ಭಕ್ತರನ್ನು ಉದ್ದೇಶಿಸಿ ಮಾತನಾಡಿದರು. ಕೊಪ್ಪಳ ಗವಿಮಠ ಹಾಗೂ ಗವಿಸಿದ್ದೇಶ್ವರನ ಹೆಸರನ್ನು ನಮ್ಮ ಮಠದ ಆವರಣವನ್ನು ಬಿಟ್ಟು ಹೊರಗೆ ಎಲ್ಲೂ ಕೊಂಡೊಯ್ಯಬೇಡಿ. ಜೊತೆಗೆ ಕೊಪ್ಪಳ ರೈಲ್ವೆ ನಿಲ್ದಾಣಕ್ಕೆ ಗವಿಸಿದ್ಧೇಶ್ವರ ರೈಲು ನಿಲ್ದಾಣವೆಂದು ಹೆಸರಿಡಲು ಅನೇಕರು ಮನವಿ ಮಾಡಿದರು.
ಈ ಗವಿಸಿದ್ದೇಶ್ವರ ನಿಮ್ಮ ಉಸಿರಿನಲ್ಲಿದ್ದಾನೆ. ಹೀಗಿರುವಾಗ ಮತ್ತೊಂದಕ್ಕೆ ಅವರ ಹೆಸರೇಕೆ ಬೇಕು..? ಇವತ್ತು ನಿಲ್ದಾಣಕ್ಕೆ ಹೆಸರು ಇಡುತ್ತೀರಿ. ನಾಳೆ ಮತ್ತೊಂದಕ್ಕೆ ಅವರ ಹೆಸರಿಡುವುದಾಗಿ ಮತ್ತೊಬ್ಬರು ಹೇಳುವುದು ಬೇಡ. ಇದು ಒಬ್ಬರಿಂದ ಇನ್ನೊಬ್ಬರಿಗೆ ತೊಂದರೆ ಆಗೊದು ಬೇಡ ಎಂದು ಭಕ್ತರಲ್ಲಿ ವಿನಂತಿಸಿಕೊಂಡರು.
ರಾಜ್ಯದ ಭಕ್ತಾದಿಗಳಿಗೆ ಈಗಾಗಲೇ ನನ್ನ ಮೇಲೆ ಪ್ರೀತಿ, ವಿಶ್ವಾಸ ಇದೆ. ಹಾಗಂತ ಮತ್ತೊಬ್ಬ ಸ್ವಾಮೀಜಿಗೆ ನನ್ನನ್ನು ಹೋಲಿಸಿ ಸಾಮಾಜಿಕ ಜಾಲತಾಣದಲ್ಲಿ ವಿಮರ್ಶೆ ಮಾಡಬೇಡಿ. ಗವಿ ಮಠವನ್ನು ಮತ್ತೊಂದು ಮಠದೊಂದಿಗೆ ಹೋಲಿಸಬೇಡಿ. ನಾಡಿನ ಎಲ್ಲ ಪೂಜ್ಯರ ಪಾದದ ಧೂಳಿಗೆ ನಾನು ಸಮನಾದವನಲ್ಲ. ನಾನು ಇನ್ನೊಂದು ಏನೆಂದರೆ, ಜಾತಿ, ಧರ್ಮದ ವಿಷಯವಾಗಿ ನನ್ನನ್ನು ಎಲ್ಲೂ ಕರೆದುಕೊಂಡು ಹೋಗಬೇಡಿ ಎಂದು ಶ್ರೀಗಳವರು ಭಾವುಕರಾದರು.
ನಾನು ಯಾವ ಪ್ರಶಸ್ತಿಗೆ ಅರ್ಹನಲ್ಲ. ಅದನ್ನು ತಿರಸ್ಕರಿಸುವಷ್ಟು ಶಕ್ತನಲ್ಲ, ಹೀಗಾಗಿ ನನಗೆ ಯಾವುದೇ ಪ್ರಶಸ್ತಿ ನೀಡುವಂತೆ ಯಾರಿಗೂ ಒತ್ತಾಯ ಮಾಡಬೇಡಿ. ನನಗೆ ನಿಮ್ಮ ಸೇವೆಯೊಂದೇ ಸಾಕು. ನಾನು ಇದುವರೆಗೂ ಎಲ್ಲೂ ನನ್ನ ಫೋಟೋ ಹಾಕಿಕೊಂಡಿಲ್ಲ. ನಾನು ನಮ್ಮ ಮಠದಲ್ಲಿ ಗುರುಗಳ ಫೋಟೋ ಹಾಕಿರುವೆ ಎಂದು ಹೇಳಿದರು.
ನಾನು ಈ ಮಠದ ಆಳುಮಗ. ಅಷ್ಟೇ ದೇಹದಲ್ಲಿ ಉಸಿರು ಇರುವವರೆಗೂ ಗವಿಸಿದ್ದಪ್ಪಜ್ಜ ಹಾಗೂ ನಿಮ್ಮ ಸೇವೆ ಮಾಡುವುದು ನನ್ನ ಕಾಯಕ ಮತ್ತು ಪೂಜೆ, ಓದು, ಸೇವೆ ನನ್ನ ಜೀವನದ ಗುರಿಯಾಗಿದೆ. ದಯವಿಟ್ಟು ತಾವುಗಳು ನನ್ನ ಭಾವನೆ ಅರ್ಥ ಮಾಡಿಕೊಳ್ಳಿ ಎಂದು ಕ್ಷಣಕಾಲ ಭಕ್ತರಲ್ಲಿ ಮನವಿ ಮಾಡಿದರು.