ಬೆಂಗಳೂರು : ಕರ್ನಾಟಕ ಸರ್ಕಾರ ಡೀಸೆಲ್​ ಮೇಲಿನ ತೆರಿಗೆಯನ್ನು ಶೇ 2.73 ರಷ್ಟು ಹೆಚ್ಚಳ ಮಾಡಿ ತಕ್ಷಣದಿಂದಲೇ ಜಾರಿಗೆ ಬರುವಂತೆ ಆದೇಶ ಹೊರಡಿಸಿದೆ. ಇದರಿಂದ, ಡೀಸೆಲ್ ಬೆಲೆ ಲೀಟರ್‌ಗೆ 2 ರೂ.ಗಳಷ್ಟು ಹೆಚ್ಚಾಗಲಿದೆ. ಈ ಹಿಂದೆ ಶೇ 18.44 ರಷ್ಟು ಇದ್ದ ತೆರಿಗೆ, ಇದೀಗ ಶೇ 21.17ಕ್ಕೆ ಏರಿಕೆಯಾಗಿದೆ. ಸದ್ಯ ಬೆಂಗಳೂರಲ್ಲಿ ಡಿಸೇಲ್​ 88.99 ರೂ. ಮಾರಾಟವಾಗುತ್ತಿದೆ. ಬೆಲೆ ಏರಿಕೆಯಿಂದ ಡೀಸೆಲ್ ಬೆಲೆ 90 ರೂ. ಆಗಲಿದೆ.

ಕರ್ನಾಟಕ ಸರ್ಕಾರ ಹಾಲು ಮತ್ತು ವಿದ್ಯುತ್ ದರ ಏರಿಕೆ ಮಾಡಿದ್ದು, ಇಂದಿನಿಂದಲೇ ಜಾರಿಗೆ ಬಂದಿದೆ. ದರ ಏರಿಕೆಯಿಂದ ರಾಜ್ಯದ ಜನರು ರೋಸಿ ಹೋಗಿದ್ದಾರೆ. ದುಬಾರಿ ದುನಿಯಾದಲ್ಲಿ ಜೀವನ ನಡೆಸುವುದು ಕಷ್ಟಕರವಾಗಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೇ, ವಿರೋಧ ಪಕ್ಷಗಳು ದರ ಏರಿಕೆಯನ್ನು ವಿರೋಧಿಸಿ, ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲು ಮುಂದಾಗಿವೆ.

ಇದರ ನಡುವೆಯೇ, ರಾಜ್ಯ ಸರ್ಕಾರ ಡೀಸೆಲ್​ ದರವನ್ನು 2 ರೂ. ನಷ್ಟು ಏರಿಕೆ ಮಾಡಿದ್ದ ರಾಜ್ಯದ ಜನರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ರಾಜ್ಯ ಸರ್ಕಾರ ಕಳೆದ ವರ್ಷವೂ ಪೆಟ್ರೋಲ್​ ಮತ್ತು ಡೀಸೆಲ್​ ದರವನ್ನು ಏರಿಕೆ ಮಾಡಿತ್ತು. ತೆರಿಗೆ ದರ ಹೆಚ್ಚಳದ ಕಾರಣ ರಾಜ್ಯದಲ್ಲಿ ಪೆಟ್ರೋಲ್ ಬೆಲೆ 3 ರೂ. ಹಾಗೂ ಡಿಸೇಲ್ ಬೆಲೆ 3.50 ರೂಪಾಯಿ ಹೆಚ್ಚಳ‌ವಾಗಿತ್ತು.

ರಾಜ್ಯ ಸರ್ಕಾರದ ದರ ಏರಿಕೆಯನ್ನು ವಿರೋಧಿಸಿ ಬಿಜೆಪಿ ರಾಜ್ಯಾದ್ಯಂತ ಹೋರಾಟ ಮಾಡಲು ಮುಂದಾಗಿದೆ. ಇಂದಿನಿಂದ ಅಹೋರಾತ್ರಿ ಧರಣಿ ನಡೆಸಲು ಬಿಜೆಪಿ ನಿರ್ಧರಿಸಿದೆ. ರಾಜ್ಯ ಸರ್ಕಾರದ ದರ ಏರಿಕೆಯನ್ನು ವಿರೋಧಿಸಿ, ನಮ್ಮ ಹೋರಾಟ ಎಂದು ಬಿಜೆಪಿ ಹೇಳಿದೆ.

Leave a Reply

Your email address will not be published. Required fields are marked *