ಬೆಂಗಳೂರು : ಬಸ್ ಟಿಕೆಟ್ ದರ ಏರಿಕೆ ಮಾಡಿ ರಾಜ್ಯದ ಜನತೆಗೆ ಶಾಕ್ ನೀಡಿರುವ ರಾಜ್ಯ ಸರ್ಕಾರ, ಇದೀಗ ಹಾಲಿನ ದರ ಏರಿಕೆ ಮಾಡಲು ಚಿಂತನೆ ನಡೆಸುತ್ತಿದೆ ಎಂಬ ಮಾಹಿತಿ ಹೊರಬಂದಿದೆ.

ಹಾಲಿನ ಬೆಲೆ ಏರಿಕೆ ಕುರಿತು ಪ್ರತಿಕ್ರಿಯೆ ನೀಡಿರುವ ಪಶುಸಂಗೋಪನಾ ಸಚಿವ ಕೆ. ವೆಂಕಟೇಶ್ ಅವರು, ಹಾಲಿನ ದರ ಹೆಚ್ಚಳ ಮಾಡಬೇಕು ಎಂದು ರೈತರ ಒತ್ತಾಯ ಇದೆ. ರೈತರು ಜಾನುವಾರುಗಳಿಗೆ ನೀಡುತ್ತಿರುವ ಆಹಾರ ಪದಾರ್ಥಗಳ ಬೆಲೆ ಏರಿಕೆಯಾಗಿದ್ದು, ಈ ಹಿನ್ನೆಲೆ ಹಾಲಿನ ದರ ಲೀಟರಕ್’ಗೆ ರೂ.8 ರಿಂದ 10 ರೂ. ಏರಿಕೆ ಮಾಡಿ ಎಂದು ಬೇಡಿಕೆ ಇಟ್ಟಿದ್ದಾರೆ. ಈ ಬಗ್ಗೆ ನಾವಿನ್ನೂ ಚರ್ಚೆ ಮಾಡುತ್ತಿದ್ದೇವೆ. ಚರ್ಚೆ ಬಳಿಕ ಅಂತಿಮ ತೀರ್ಮಾನ ಮಾಡುತ್ತೇವೆ ಎಂದು ಹೇಳಿದರು.

ರೈತರು ಹಾಲಿನ ಮೇಲೆ ಅವಲಂಬಿತರಾಗಿದ್ದಾರೆ. ದಿನೇ ದಿನೇ ಹಾಲಿನ ಉತ್ಪಾದನೆ ಹೆಚ್ಚಳ ಆಗುತ್ತಿದೆ. ರೈತರಿಗೆ ಅನ್ಯಾಯ ಆಗದಂತೆ ನೋಡಿಕೊಳ್ಳಬೇಕು. 5 ರೂ, 3 ರೂ, 10 ರೂ. ಮಾಡುತ್ತೇವೋ ಅದು ಇನ್ನೂ ತೀರ್ಮಾನ ಆಗಿಲ್ಲ. ಈ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳುವ ಮೊದಲು ಸಿದ್ದರಾಮಯ್ಯ ಅವರೊಂದಿಗೆ ಸಮಾಲೋಚನೆ ನಡೆಸಲಾಗುವುದು ಎಂದು ತಿಳಿಸಿದರು.

ನಿರ್ಧಾರ ಯಾವಾಗ ತೆಗೆದುಕೊಳ್ಳಲಾಗುತ್ತದೆ ಎಂಬುದರ ಕುರಿತ ಪ್ರಶ್ನೆಗೆ ಉತ್ತರಿಸಿ, ಶೀಘ್ರದಲ್ಲೇ ತೆಗೆದುಕೊಳ್ಳಲಾಗುತ್ತದೆ. ಏಕೆಂದರೆ ಬಜೆಟ್‌ಗೂ ಮುನ್ನ ರಾಜ್ಯ ಸರ್ಕಾರವು ತನ್ನ ಆದಾಯದ ಬಗ್ಗೆ ಸ್ಪಷ್ಟತೆಯನ್ನು ಹೊಂದಿರಬೇಕಿದೆ ಎಂದರು.
ಇತ್ತೀಚೆಗೆ, ರಾಮನಗರ ಜಿಲ್ಲೆಯ ಮಾಗಡಿಯ ಕೆಲವು ಹೈನುಗಾರರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಹಾಲಿನ ಬೆಲೆಯನ್ನು ಲೀಟರ್‌ಗೆ 5 ರೂ. ಹೆಚ್ಚಿಸಬೇಕೆಂದು ಒತ್ತಾಯಿಸಿದ್ದರು.

ಒಟ್ಟಾರೆಯಾಗಿ ಬಸ್‌ ಪ್ರಯಾಣ ದರ ಏರಿಕೆಯ ಬೆನ್ನಲ್ಲೇ ರಾಜ್ಯ ಸರ್ಕಾರ ಹಾಲಿನ ಬೆಲೆ ಏರಿಕೆ ಮಾಡಲು ಮುಂದಾಗಿರುವುದು ಜನತೆಯ ಆಕ್ರೋಶಕ್ಕೆ ಕಾರಣವಾಗಿದೆ. ಹಾಲಿನ ದರ ಏರಿಕೆಯಿಂದ ರೈತರಿಗೆ ಸಹಕಾರಿಯಾದರೆ, ಹಾಲು, ಮೊಸರು ಸೇರಿದಂತೆ ಡೈರಿ ಉತ್ಪನ್ನಗಳನ್ನು ಕೊಂಡುಕೊಳ್ಳುವವರು ಜೇಬು ಮುಟ್ಟಿ ನೋಡಿಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಲಿದೆ.

ಕೆಎಂಎಫ್ ಅಡಿಯಲ್ಲಿ ಒಟ್ಟು 16 ಹಾಲು ಒಕ್ಕೂಟಗಳಿದ್ದು, ರಾಜ್ಯದಲ್ಲಿ ಸುಮಾರು 40 ಲಕ್ಷ ಡೈರಿ ರೈತರಿದ್ದಾರೆ. ದಿನಕ್ಕೆ ಸರಾಸರಿ ಒಂದು ಕೋಟಿ ಲೀಟರ್ ಹಾಲು ಸಂಗ್ರಹಿಸಲಾಗುತ್ತಿದ್ದು, ಇದು ಹೈನುಗಾರಿಕೆಯಲ್ಲಿ ಕರ್ನಾಟಕವನ್ನು ಅಗ್ರದಲ್ಲಿರುವ ರಾಜ್ಯವನ್ನಾಗಿ ಮಾಡಿದೆ.

Leave a Reply

Your email address will not be published. Required fields are marked *