ಗಾಜಾ : ಗಾಜಾದಲ್ಲಿ ಕನಿಷ್ಠ 12 ಪ್ಯಾಲೆಸ್ಟೀನಿಯಾದವರನ್ನು ಕೊಲ್ಲುವ ಮೂಲಕ ಇಸ್ರೇಲ್ 2025 ರನ್ನು ಆರಂಭಿಸಿದೆ. ಈ ಪೈಕಿ ಹೆಚ್ಚಾಗಿ ಮಹಿಳೆಯರು ಮತ್ತು ಮಕ್ಕಳು ಸಾವನ್ನಪ್ಪಿದ್ದಾರೆ ಎಂದು ಗಾಜಾ ಆರೋಗ್ಯ ಸಚಿವಾಲಯ ತಿಳಿಸಿದೆ.
ಅಕ್ಟೋಬರ್ ಆರಂಭದಿಂದಲೂ ಇಸ್ರೇಲ್ ತನ್ನ ಕ್ರೂರ ದಾಳಿಯನ್ನು ನಡೆಸಿದ ಭೂಪ್ರದೇಶದ ಉತ್ತರ ಗಾಜಾದ ಜಬಾಲಿಯಾ ಪ್ರದೇಶದಲ್ಲಿ ಇಸ್ರೇಲ್ ದಾಳಿಗೆ ಮನೆಯೊಂದು ಧ್ವಂಸಗೊಂಡಿದೆ. ಮಹಿಳೆ ಮತ್ತು ನಾಲ್ಕು ಮಕ್ಕಳು ಸೇರಿದಂತೆ ಏಳು ಜನರು ಸಾವನ್ನಪ್ಪಿದ್ದಾರೆ ಹಾಗೂ ಕನಿಷ್ಠ ಒಂದು ಡಜನ್ ಜನರು ಗಾಯಗೊಂಡಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.
ಮಧ್ಯ ಗಾಜಾದ ಬುರೇಜ್ ನಿರಾಶ್ರಿತರ ಶಿಬಿರದಲ್ಲಿ ರಾತ್ರಿಯಿಡೀ ನಡೆದ ಮತ್ತೊಂದು ದಾಳಿಗೆ ಮಹಿಳೆ ಮತ್ತು ಮಗು ಬಲಿಯಾಗಿದ್ದಾರೆ ಎಂದು ಮೃತದೇಹಗಳನ್ನು ಸ್ವೀಕರಿಸಿದ ಅಲ್-ಅಕ್ಸಾ ಹುತಾತ್ಮರ ಆಸ್ಪತ್ರೆ ತಿಳಿಸಿದೆ. “ನೀವು ಸಂಭ್ರಮಿಸುತ್ತಿದ್ದೀರಾ? ನಾವು ಸಾಯುತ್ತಿರುವಾಗ ನೀವು ಆನಂದಿಸಿ. ಒಂದೂವರೆ ವರ್ಷದಿಂದ ನಾವು ಸಾಯುತ್ತಿದ್ದೇವೆ” ಎಂದು ತುರ್ತು ವಾಹನಗಳಲ್ಲಿ ಮಗುವಿನ ದೇಹವನ್ನು ಹೊತ್ತ ವ್ಯಕ್ತಿಯೊಬ್ಬರು ಹೇಳಿದರು.
ಗಾಜಾದ ಮೇಲೆ ಇಸ್ರೇಲ್ ನಡೆಸಿದ ನರಮೇಧ ಇದುವರೆಗೆ 45,000 ಪ್ಯಾಲೆಸ್ಟೀನಿಯನ್ನರನ್ನು ಕೊಂದಿದೆ ಎಂದು ಗಾಜಾದ ಆರೋಗ್ಯ ಸಚಿವಾಲಯ ತಿಳಿಸಿದೆ. ಸತ್ತವರಲ್ಲಿ ಅರ್ಧಕ್ಕಿಂತ ಹೆಚ್ಚು ಮಹಿಳೆಯರು ಮತ್ತು ಮಕ್ಕಳಿದ್ದಾರೆ. ಇಸ್ರೇಲ್ 190 ಕ್ಕೂ ಹೆಚ್ಚು ಪತ್ರಕರ್ತರನ್ನು ಮತ್ತು ಕನಿಷ್ಠ 1000 ಆರೋಗ್ಯ ಕಾರ್ಯಕರ್ತರನ್ನು ಗಾಜಾದಲ್ಲಿ ಕೊಂದಿದೆ ಎಂದು ವರದಿಯಾಗಿದೆ.