ದೆಹಲಿ : ದೆಹಲಿ ವಿಧಾನಸಭೆಯ ಬಜೆಟ್ ಅಧಿವೇಶನ ಇಂದಿನಿಂದ ಪ್ರಾರಂಭವಾಗಿದೆ. ಖೀರ್ ಸಮಾರಂಭದೊಂದಿಗೆ ಅಧಿವೇಶನ ಉದ್ಘಾಟನೆಗೊಂಡಿದೆ. 27 ವರ್ಷಗಳ ಬಳಿಕ ಅಧಿಕಾರ ವಶಪಡಿಸಿಕೊಂಡಿರುವ ಬಿಜೆಪಿ ಸರ್ಕಾರ, ಮಂಗಳವಾರ ಮೊದಲ ಬಜೆಟ್ ಮಂಡಿಸಲು ಸಜ್ಜಾಗಿದೆ. ಮಾರ್ಚ್ 25ರಂದು ನಡೆಯುವ ಅಧಿವೇಶನದಲ್ಲಿ, ಮುಖ್ಯಮಂತ್ರಿ ರೇಖಾ ಗುಪ್ತ ಅವರು 2025-26ನೇ ಹಣಕಾಸು ವರ್ಷದ ಬಜೆಟ್ ಮಂಡಿಸಲಿದ್ದಾರೆ.
ನಿವೃತ್ತ ಶಾಸಕಿ, ಮೊದಲು ಬಿಜೆಪಿ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದಂತೆ, ರೇಖಾ ಗುಪ್ತ ಅವರು ಮಹಿಳೆಯರಿಗೆ ಮಾಸಿಕ 2,500 ರೂ., ವರ್ಷಕ್ಕೆ 2 ಉಚಿತ ಗ್ಯಾಸ್ ಸಿಲಿಂಡರ್‌ಗಳು, ಯುವಕರು ಮತ್ತು ಕಾರ್ಮಿಕರ ಜೀವನಮಟ್ಟವನ್ನು ಸುಧಾರಿಸುವ ಯೋಜನೆಗಳಿಗೆ ಅನುದಾನ ಘೋಷಣೆ ಮಾಡುವ ನಿರೀಕ್ಷೆಯಿದೆ.
ಆಪ್ ಸರ್ಕಾರದ ಉಚಿತ ಯೋಜನೆಗಳನ್ನು ಮುಂದುವರಿಸುವ ಸಾಧ್ಯತೆಗಳೂ ಇವೆ. ಜೊತೆಗೆ, ಡಿಟಿಸಿ ಕಾರ್ಯವೈಖರಿ ಕುರಿತ ಸಿಎಜಿ ವರದಿಯನ್ನೂ ಬಜೆಟ್ ಅಧಿವೇಶನದಲ್ಲಿ ಮಂಡಿಸಲಾಗುವುದು ಎಂದು ಹೇಳಲಾಗುತ್ತಿದೆ. ಮುಂಬರುವ ಹಣಕಾಸು ವರ್ಷದ ಹಣಕಾಸು ನೀತಿಗಳು ಮತ್ತು ಅಭಿವೃದ್ಧಿ ಮಾರ್ಗಸೂಚಿಯನ್ನು ನಿರ್ಧರಿಸಲು ಈ ಅಧಿವೇಶನ ಅತ್ಯಂತ ಮಹತ್ವದ್ದಾಗಿದೆ.
ಮಾರ್ಚ್ 24ರಿಂದ ಮಾರ್ಚ್ 28ರವರೆಗೆ ನಡೆಯುವ ಈ ಅಧಿವೇಶನದ ಅವಧಿಯನ್ನು ವಿಸ್ತರಿಸುವ ಸಾಧ್ಯತೆ ಇದ್ದು, ಇದಕ್ಕೆ ಸಂಬಂಧಿಸಿದಂತೆ ವಿಧಾನಸಭೆ ಸ್ಪೀಕರ್ ವಿಜೇಂದ್ರ ಗುಪ್ತಾ ತಿಳಿಸಿದ್ದಾರೆ. ಮಾರ್ಚ್ 26ರಂದು ಬಜೆಟ್ ಮೇಲಿನ ಚರ್ಚೆ ನಡೆಯಲಿದ್ದು, ಮಾರ್ಚ್ 27ರಂದು ಮಂಡಿಸಿದ ಬಿಲ್‌ಗಳಿಗೆ ಅನುಮೋದನೆ ನೀಡಲಾಗುತ್ತದೆ.
ಮಾರ್ಚ್ 28ರಂದು ಖಾಸಗಿ ಮಸೂದೆಗಳು ಹಾಗೂ ನಿರ್ಣಯಗಳ ಮೇಲೆ ಚರ್ಚೆ ನಡೆಯಲಿದೆ. ಹೀಗಾಗಿ, ಎಲ್ಲ ಸದಸ್ಯರು ಸದನದ ಘನತೆಯನ್ನು ಕಾಪಾಡಲು ಸ್ಪೀಕರ್ ಮನವಿ ಮಾಡಿದ್ದಾರೆ. ದೆಹಲಿಯಲ್ಲಿ ಬಜೆಟ್ ಬಗ್ಗೆ ಹಲವಾರು ಸಲಹೆಗಳು ಬಂದಿದ್ದು, ಸುಮಾರು 10,000 ಸಲಹೆಗಳು ಸ್ವೀಕರಿಸಲಾಗಿದೆ. ಇವುಗಳಲ್ಲಿ 3,303 ಸಲಹೆಗಳು ಇಮೇಲ್ ಮೂಲಕ ಹಾಗೂ 6,982 ಸಲಹೆಗಳು ವಾಟ್ಸಪ್ ಮೂಲಕ ಬಂದಿವೆ.