ಬೆಂಗಳೂರಿನಲ್ಲಿ ದಿಢೀರನೆ ರಸ್ತೆ ಬದಿ ಅಂಗಡಿ ವ್ಯಾಪಾರಿಗಳನ್ನು ತೆರವುಗೊಳಿಸುವ ಕಾರ್ಯಾಚರಣೆ ನಡೆದಿದ್ದು, ನೂರಾರು ಅಂಗಡಿಗಳನ್ನು ಜೆಸಿಬಿ ವಾಹನಗಳ ಮೂಲಕ ತೆರವುಗೊಳಿಸಲಾಗಿದೆ.
ನಗರದ ಪ್ರತಿಷ್ಠಿತ ವ್ಯಾಪಾರಿ ಬಡಾವಣೆಗಳಾದ ಜಯನಗರ ಹಾಗೂ ಮಲ್ಲೇಶ್ವರದಲ್ಲಿ ರಸ್ತೆ ಬದಿ ಅಂಗಡಿಗಳನ್ನು ತೆರವುಗೊಳಿಸಲಾಯಿತು.
ಜಯನಗರದಲ್ಲಿ ಸುಮಾರು 32 ಹಾಗೂ ಮಲ್ಲೇಶ್ವರದಲ್ಲಿ 50ಕ್ಕೂ ಹೆಚ್ಚು ಅಂಗಡಿಗಳನ್ನು ತೆರವುಗೊಳಿಸಲಾಗಿದೆ.
ಯಾವುದೇ ನೋಟಿಸ್ ನೀಡದೇ ರಸ್ತೆ ಬದಿ ಅಂಗಡಿ ವ್ಯಾಪಾರಿಗಳನ್ನು ತೆರವುಗೊಳಿಸಲಾಗಿದೆ. ಮಾಲೀಕರು ಒಂದೆರಡು ಗಂಟೆಯ ಅವಕಾಶ ನೀಡಿ ಎಂದು ಮನವಿ ಮಾಡಿದರೂ ಕಿವಿಗೆ ಹಾಕಿಕೊಳ್ಳದ ಅಧಿಕಾರಿಗಳು ಅಮಾನವೀಯವಾಗಿ ನಡೆಸಿಕೊಂಡಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಯಿತು.
ಜಯನಗರದ ಬಿಡಿಎ ಕಾಂಪ್ಲೆಕ್ಸ್ ಬಳಿ ಇದ್ದ ವ್ಯಾಪಾರಿಗಳಿಗೆ ತೆರವು ಮಾಡುವಂತೆ ಅಧಿಕಾರಿಗಳು ಮನವಿ ಮಾಡಿದ್ದರು. ಆದರೆ ಅದಕ್ಕೆ ಕಿವಿಗೊಡದ ವ್ಯಾಪಾರಿಗಳು ತಮ್ಮ ವ್ಯಾಪಾರ ಮುಂದುವರಿಸಿದ್ದರು. ರಸ್ತೆ ಸಂಚಾರಕ್ಕೆ ಅಡ್ಡಿಯಾಗುತ್ತಿದೆ ಮತ್ತು ಸಾರ್ವಜನಿಕರಿಗೆ ಕಿರಿಕಿರಿ ಆಗುತ್ತಿದೆ ಎಂಬ ಕಾರಣಕ್ಕೆ ತೆರವು ಮಾಡಿದ್ದಾಗಿ ಅಧಿಕಾರಿಗಳು ಹೇಳಿಕೊಂಡಿದ್ದಾರೆ.